Saturday, May 15, 2021



#ವರುಣದೇವನಲ್ಲೊಂದು ಅರಿಕೆ

ಭೂಗರ್ಭದಲ್ಲಿ ಒಣಗುತಿಹುದು ನೀರಪಸೆ
ಬಳಲಿಹವು ಪಶುಪಕ್ಷಿಗಳು ಬಾಯಾರಿಕೆಯಲಿ
ತಾಪಮಾನದ ಅಂಕೆ ಕೆಳಗಿಳಿಸುವ ಆಸೆ
ಇಳಿದು ಬಾ ಇಳೆಗೊಮ್ಮೆ ತಂಪನೆರಚುತಲಿ

ಮೊಳಕೆಯೊಡೆಯಲು ಬೀಜ ಕಾದಿದೆ ಮಳೆಯ ಸ್ಪರ್ಶಕೆ
ಚಿಗುರುಗಳು ಹೊರಬರಲು ಮಳೆಹನಿಗಳ ಕರೆದಿದೆ
ಹಸಿರ ಸೀರೆ ಉಡಲು ಇಳೆಗೆ ಇನ್ನಿಲ್ಲದ ಕಾತರಿಕೆ
ಬಣ್ಣಗಳ ಹುಡುಕಿ ತರಲು ಕಾಮನಬಿಲ್ಲು ಹೊರಟಿದೆ

ಆಶ್ರಿತರಿಗೆ ನೀರುಣಿಸಲು ಭೂತಾಯಿಗೆ ಆತುರ
ಹೊರಟಿವೆ ಮೇಘಗಳ ಮೆರವಣಿಗೆ ತಂಪುಗಾಳಿ ಸನಿಹಕೆ
ಸುಳಿಗಾಳಿ ಓಡುತಿದೆ ತಂಪ ಹುಡುಕುತ ಸರ ಸರ
ತೆಗೆದೆಸೆಯಬೇಕಿದೆ ಇಳೆಗೆ ಬಿಸಿಯ ಬಿಗಿ ಹೊದಿಕೆ

ನವಿಲನಾಟ್ಯಕೆ ನಿನ್ನ ನಾದ ಸೇರಿಸುತಾ
ಆಗಮಿಸಿಬಿಡು ಮಳೆರಾಯ ಉಳಿದಿಲ್ಲ ಸೈರಣೆ
ಇಳಿದು ಬಾ ಇಳೆಗೊಮ್ಮೆ ಮಾಡದಿರು ಧಾಂದಲೆಯ 
ಅಳಿಸಿಬಿಡು ಜಗದ ಬವಣೆ

ಲತಾಶ್ರೀ ಹೆಗಡೆ

Monday, March 22, 2021

 #ಭಕ್ತಿ 

ಎನ್ನ ಉಸಿರಲಿ ನಿನ್ನ ನಾಮಸ್ಮರಣೆಯ ಮಾಳ್ಪೆನು

ಭಕ್ತಿ ಭಾವಗಳಿಂದ ನಿನ್ನ ಪೂಜಿಪೆನು

ಮಂತ್ರ ಘೋಷಗಳನ್ನು ನಾ ಮಾಡಲರಿಯೆನು

ಯಜ್ಞ ಯಾಗಾದಿಗಳನ್ನು  ನಾ ತಿಳಿಯೆನು


ಶರಣೆಂದು ಪೂಜಿಪೆನು ನಿನ್ನ ಪಾದವ ನಾನು

ಸವಿಯುವೆನು ನಿನ್ನ ಕಥಾಮೃತವನು

ಗುಡಿಗೋಪುರಗಳನು ಕಟ್ಟಲಾರೆನು ನಾನು

ಎಲ್ಲ ನಿನ್ನದಯ್ಯ ಕೊಡಲೇನ ನಾನು


ನಿನ್ನ ನಂಬಿದೆ ನಾನು ಅನುಗ್ರಹಿಸು ದೇವಾ

ಅಜ್ಞಾನಿ ನಾನು ಕ್ಷಮಿಸಿ ಸಲಹೋ ದೇವಾ

ನಿನ್ನ ಚರಣ ಕಮಲಕ್ಕೆ ವಂದಿಪೆನು ದೇವಾ

ಸದ್ಭಕ್ತಿ ಮುಕ್ತಿಪ್ರದ ಮಾಡೆನಗೆ ದೇವಾ

🙏🙏

Saturday, March 13, 2021

 ಮಹಾ ಶಿವರಾತ್ರಿ ಪ್ರಯುಕ್ತ ಕವನ


ಶಿವ


ಈಶಜಗದೀಶ ತ್ರಿಪುರಾಂತಕೇಶ್ವರ

ಕರುಣಿಸೆಮಗೆನೀ ಎಂದೆಂದೂ ಶುಭಕರ

ನಿನಗೆ ಮೆಚ್ಚುಗೆ ಡೋಲು ಢಮರುಗದ ಝೇಂಕಾರ

ನಿನ್ನ ನಾಮದ ನಾದ ಅದುವೆ ಓಂಕಾರ


ಗೌರೀಪ್ರಿಯ ನೀಲಕಂಠ ಹರ ಗಂಗಾಧರ

ನಂದೀವಾಹನ ಚಂದ್ರಮೌಳಿ ಬಾ ಬೇಗ ಶಶಿಧರ

ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯ ಮಹಾ ರೌದ್ರೇಶ್ವರ

ಭವದ ಬವಣೆಯ ನೀಗಿ ಸುಖ ನೀಡು ಸರ್ವೇಶ್ವರ


ಬಿಲ್ವಪ್ರಿಯ ಭಸ್ಮ ಲೇಪಿತ ಶಂಭೋಶಂಕರ

ರಕ್ಷಿಸಿ ಕಾಪಾಡು ಭಕ್ತರನು ದೇವದೇವೇಶ್ವರ

ಅನುದಿನವು ಭಜಿಸುವೆವು ಪೊರೆ ಪರಮೇಶ್ವರ

ಅಂಧಕಾರವನಳಿಸಿ ಬೆಳಕ ನೀಡು ಮಹದೇಶ್ವರ

🙏🙏


ಮನಮುಕ್ತ

 ನಮಸ್ಕಾರ 🙏

ಯಾಂತ್ರಿಕ ಕಾರಣಗಳಿಂದ ನನ್ನ ಬ್ಲಾಗ್ ಬರಹ ನಿಂತು ಹೋಗಿತ್ತು. ನಂತರ ಪ್ರಾರಂಭಿಸಬೇಕೆಂದು ಆಗಾಗ ಮನಸ್ಸಿಗೆ ಬಂದರೂ ಸಣ್ಣ ಪುಟ್ಟ ಅಡಚಣೆಗಳಿಂದ ಪ್ರಾರಂಭಿಸಲು ಆಗಲೇ ಇಲ್ಲ. ಮತ್ತೆ ಬ್ಲಾಗ್ ಬರಹವನ್ನು ಪ್ರಾರಂಭಿಸಬೇಕೆಂದು ಮುಂದಡಿ ಇಟ್ಟಿದ್ದೇನೆ. ನಿಮ್ಮೆಲ್ಲರ ಸಹಕಾರ ಮತ್ತು  ಪ್ರೋತ್ಸಾಹ ಇರಲಿ.  🙏