#ವರುಣದೇವನಲ್ಲೊಂದು ಅರಿಕೆ
ಭೂಗರ್ಭದಲ್ಲಿ ಒಣಗುತಿಹುದು ನೀರಪಸೆ
ಬಳಲಿಹವು ಪಶುಪಕ್ಷಿಗಳು ಬಾಯಾರಿಕೆಯಲಿ
ತಾಪಮಾನದ ಅಂಕೆ ಕೆಳಗಿಳಿಸುವ ಆಸೆ
ಇಳಿದು ಬಾ ಇಳೆಗೊಮ್ಮೆ ತಂಪನೆರಚುತಲಿ
ಮೊಳಕೆಯೊಡೆಯಲು ಬೀಜ ಕಾದಿದೆ ಮಳೆಯ ಸ್ಪರ್ಶಕೆ
ಚಿಗುರುಗಳು ಹೊರಬರಲು ಮಳೆಹನಿಗಳ ಕರೆದಿದೆ
ಹಸಿರ ಸೀರೆ ಉಡಲು ಇಳೆಗೆ ಇನ್ನಿಲ್ಲದ ಕಾತರಿಕೆ
ಬಣ್ಣಗಳ ಹುಡುಕಿ ತರಲು ಕಾಮನಬಿಲ್ಲು ಹೊರಟಿದೆ
ಆಶ್ರಿತರಿಗೆ ನೀರುಣಿಸಲು ಭೂತಾಯಿಗೆ ಆತುರ
ಹೊರಟಿವೆ ಮೇಘಗಳ ಮೆರವಣಿಗೆ ತಂಪುಗಾಳಿ ಸನಿಹಕೆ
ಸುಳಿಗಾಳಿ ಓಡುತಿದೆ ತಂಪ ಹುಡುಕುತ ಸರ ಸರ
ತೆಗೆದೆಸೆಯಬೇಕಿದೆ ಇಳೆಗೆ ಬಿಸಿಯ ಬಿಗಿ ಹೊದಿಕೆ
ನವಿಲನಾಟ್ಯಕೆ ನಿನ್ನ ನಾದ ಸೇರಿಸುತಾ
ಆಗಮಿಸಿಬಿಡು ಮಳೆರಾಯ ಉಳಿದಿಲ್ಲ ಸೈರಣೆ
ಇಳಿದು ಬಾ ಇಳೆಗೊಮ್ಮೆ ಮಾಡದಿರು ಧಾಂದಲೆಯ
ಅಳಿಸಿಬಿಡು ಜಗದ ಬವಣೆ
ಲತಾಶ್ರೀ ಹೆಗಡೆ
2 comments:
ವರುಣದೇವ ನಿಮ್ಮ ಮೊರೆ ಕೇಳಿಸಿಕೊಂಡ ಅಂತ ಅನಿಸುತ್ತೆ. ಜೋರು ಮಳೆ ಇಲ್ಲೆಲ್ಲಾ :-)
ಹೌದಲ್ವಾ? 😄
ಧನ್ಯವಾದಗಳು🙏
Post a Comment