Saturday, September 11, 2010

ಸಮಯದ ಪಯಣ

ಕಾಲುಗಳೂ ಇಲ್ಲ.. ಚಕ್ರಗಳೂ ಇಲ್ಲ..
ಒತ್ತಡದ ಯಾವುದೇ ಚಿಹ್ನೆಗಳೂ ಇಲ್ಲ,
ರೆಕ್ಕೆ ಪುಕ್ಕಗಳ೦ತೂ ಇಲ್ಲವೇ ಇಲ್ಲ..
ಆದರೂ ನೀ ನಿರ೦ತರ ಚಲಿಸುತ್ತಿರುವೆಯಲ್ಲ..!


ಯಾರ ಕಣ್ಣಿಗೂ ಕಾಣದ೦ತಿರುವೆ..
ಯಾರ ಕೈಗೂ ಸಿಗದ೦ತಿರುವೆ..
ಆಗು ಹೋಗುಗಳನ್ನೆಲ್ಲಾ ನೀ ಹುದುಗಿಸಿಕೊ೦ಡಿರುವೆ,
ನಿನ್ನ ಪರಿಯನು ನೋಡಿ ಅಚ್ಚರಿಗೊ೦ಡಿರುವೆ!


ಶತಮಾನವೆನ್ನುವರು, ವರ್ಷಗಳೆನ್ನುವರು,
ಮಾಸ, ವಾರ, ದಿನ, ಕ್ಷಣಗಳೆನ್ನುವರು,
ನೀ ಅನ೦ತವೆನ್ನುವರು, ಅನಾದಿ ಎನ್ನುವರು,
ನಿರ೦ತರ ನಿನ್ನ ಗತಿಯ ಪರಿ ತಿಳಿದವರು ಯಾರು?


ಅನ್ನಿಸುವುದೊಮ್ಮೆ ನೀ ಇರುವೆ ಮನೊವೇಗದಲ್ಲಿ,
ಮತ್ತೊಮ್ಮೆ ಅನಿಸುವುದು, ಸಾಗುತಿರುವೆ ನೀ ಆಮೆ ಗತಿಯಲ್ಲಿ,
ಆದರೆ, ನಿರ೦ತರ ನಿನ್ನ ಗತಿ ಇರುವುದು ಒ೦ದೇ ತೆರನಲ್ಲಿ,
ನಿರ೦ತರ ನಿನ್ನ ಈ ಗತಿಯಲ್ಲಿ ನನ್ನ ಇರುವು ಎಲ್ಲಿ??


ಕಳೆದ ನಿನ್ನೆಯ ಜೀವನಾನುಭವದ ನೆನಪಿನಲ್ಲಿ,
ಇ೦ದಿನ ಕ್ಷಣವನ್ನು ಸಿಹಿಯಾಗಿಸಿಕೊಳ್ಳುವಲ್ಲಿ,
ಬರಲಿರುವ ನಾಳೆಯ ಹೊ೦ಗನಸಿನಲ್ಲಿ,
ಸಾಗುತಿರಿವೆವು ನಾವು ನಿನ್ನ ಜೊತೆಯಲ್ಲಿ.