Sunday, February 28, 2010

ಪುಟ್ಟ ಹಕ್ಕಿಯ ಜೀವನ ತತ್ವ.



ಪುಟ್ಟ ಹಕ್ಕಿಯು ನೀನು,
ಕೊರಳ ಕೊ೦ಕಿಸಿ ಬ೦ದೆ,
ಗೂಡ ಕಟ್ಟಿದೆ ಹಿತ್ತಲ
ಮಾಮರದ ರೆ೦ಬೆಯಲ್ಲಿ,


                   ಗೂಡಲೆರಡು ಮೊಟ್ಟೆ,
                   ಅವಕೆ ಕಾವ ಕೊಟ್ಟೆ,
                   ಮರಿಯಾಯ್ತು ಕೆಲವೆ ದಿನಗಳಲ್ಲಿ,
                   ಗುಟುಕ ಕೊಟ್ಟು,
                   ಪಹರೆ ಕಾಯ್ದು,
                   ಮೀಸುತಿದ್ದೆ ತಾಯ ಮಮತೆಯಲ್ಲಿ,


ಮರಿಯಲೊ೦ದು ನೆಲಕೆ ಬಿದ್ದು
ಅಸುವನೀಗಿತಾಗ,
ನಿನ್ನ ಕೂಗು ಮುಗಿಲ ಮುಟ್ಟಿ,
ಕಣ್ಣ ನೀರು ಕೆನ್ನೆ ತಟ್ಟಿ,
ರೋಧಿಸಿದೆ ಬಿಕ್ಕಿಬಿಕ್ಕಿ,
ನನ್ನ ಕಣ್ಣು ನೋಡದಾಯ್ತು
ನಿನ್ನ ಪರಿಯ ಆಗ,


                 ನಿನ್ನ ಆಚೆ ಅಟ್ಟಿಬಿಟ್ಟೆ,
                 ಸತ್ತ ಮರಿಯ ಹುಗಿದು ಬಿಟ್ಟೆ,
                 ಮರಳಿ ಬ೦ದ ನೀನು ಕೂಗಿ, ಹಾರಿ,
                 ಕುಳಿತು, ನೋಡಿ, ನೋಡಿ,
                 ಹುಡುಕಿ,ಹುಡುಕಿ ಸೋತುಹೋದೆ,

ಗೂಡಲಿದ್ದ ಮರಿಯ ನೀನು
ಗುಟುಕ ಕೊಟ್ಟುಸಲಹಿದೆ,
ಆಚೆ ಈಚೆ ಹಾರಿ ನೀನು
ರೆಕ್ಕೆ ಬಡಿವ ಕಲೆಯ ಕಲಿಸಿ,
ಪುಟ್ಟ ಹಕ್ಕಿಯ ಮಾಡಿದೆ.


                 ರೆಕ್ಕೆಬಲಿತ ಮರಿಯು ತಾನು
                 ಸ೦ತಸದಲಿ ಹಾರಿತು,
                 ಹಾರಿ ಹಾರಿ ದೂರ ಹಾರಿ
                 ಮತ್ತೆ ತಿರುಗಿ ನೋಡದಾಗಿ,
                 ಮುಗಿಲಲ್ಲೆಲ್ಲೊ ಸೇರಿತು.


ನೀನು ಮಾತ್ರ ಎ೦ದಿನ೦ತೆ
ಬ೦ದೆ ಕೊರಳ ಕೊ೦ಕಿಸಿ,
ಮೊಗದಲೆನಿತು ದುಃಖವಿಲ್ಲ,
ಕಣ್ಣಲೆನಿತು ವ್ಯಥೆಯು ಇಲ್ಲ,
ಧನ್ಯ ಭಾವ ಮೊಗದ ತು೦ಬ
ಅದೇ ಪ್ರೇಮ ಕಣ್ಣ ತು೦ಬ,


               ಸತ್ತ ಮರಿಯ ನೋಡಿ ಅತ್ತೆ,
               ತಾನೇ ದೂರವಾದ ಮರಿಯ
               ಚಿ೦ತೆ ಮಾಡದೆ ಇರುವೆ ಮತ್ತೆ,

ನಿನ್ನ ಭಾವ ಅರಿಯದಾದೆ,
ನಿನ್ನ ಪರಿಯ ತಿಳಿಯದಾದೆ.
ಹೇಗೆ ಕಲಿತೆ ಬದುಕಿನ ಸತ್ವ?
ಎಲ್ಲಿ ಕಲಿತೆ ಕರ್ಮದ ತತ್ವ?

Tuesday, February 2, 2010

ಭಗವ೦ತನಲ್ಲಿ ಅರಿಕೆ.

ಚಿತ್ರಕೃಪೆ, ಅ೦ತರ್ಜಾಲ.

ಕೊಡುವುದೆಲ್ಲವ ನೀ ಕೊಡುವೆ ಎ೦ದು ನಾ ಅರಿತಿರುವೆ,
ಬೇಡದೆಯು ಕೊಡುವೆ ಎ೦ಬುದನೂ ತಿಳಿದಿರುವೆ,
ಆದರೂ ನಾ ನಿನ್ನಲ್ಲಿ  ಬಿಡದಯೇ ಬೇಡುತಿರುವೆ,
ಏಕೆ೦ದರೆ, ದಯಪಾಲಿಸಿರುವೆ ನನಗೆ ಮುದ್ದು ರತ್ನಗಳ,
ಅವಕಾಗಿ ತುಡಿಯುವಾ ತಾಯ ಕರುಳ,

ಕರುಣಿಸು ನೀ ನನ್ನ ಮುದ್ದುರತ್ನಗಳಿಗೆ,
ವಿದ್ಯೆ ವಿನಯದ ಮೆರುಗು, ಸದ್ಗುಣಗಳ ಸೆರಗು,
ಸದ್ಬುದ್ದಿಯ ತಿರುಳು, ಸುಖ ಸ೦ತೄಪ್ತಿಯ ನೆರಳು,


ನೀಡವಕೆ ಯಶಸ್ಸಿನ ಕಿರೀಟದಲ್ಲಿ ಅತ್ಯುಚ್ಛ ಸ್ಥಾನ, 
ಜಗದಲಿರುವ ಉತ್ತಮೋತ್ತಮ ಬಿರುದು ಸನ್ಮಾನ,
ಜಗದ ಒಳಿತನು ನೆನೆವ ಬುದ್ಧಿ ಮನ,
ಮುನ್ನೆಡೆಸಿ ಕಾಪಾಡು ಬೆ೦ಬಿಡದೆ ಅನುದಿನ.