Sunday, March 28, 2010

ಹೊಟ್ಟೆನೋವಿಗೆ ಮನೆಮದ್ದು.

ಪಕ್ಕದ ಮನೆಯ ಮೂರು ವರುಷದ ಸ್ನೇಹಾ ಒ೦ದೇ ಸಮನೆ ಅಳಲು ಶುರು ಮಾಡಿದಳು.   
ಸ್ನೇಹಾ ಚೊಚ್ಚಲು ಮಗುವಾದ್ದರಿ೦ದ ಅವಳಮ್ಮ  ರಮಾಳಿಗೆ  ಮಕ್ಕಳ ಅನಾರೋಗ್ಯದ ಬಗ್ಗೆ, ತುರ್ತು ಉಪಚಾರದ ಬಗ್ಗೆ ಹೆಚ್ಚಿನ ಪರಿಚಯವಿಲ್ಲ.  ರಮಾಳನ್ನು ವಿಚಾರಿಸಿದಾಗ ಎನ್ಮಾಡೊದು ತಿಳಿಯುತ್ತಿಲ್ಲ   ಹೊಟ್ಟೆನೋವು ಅ೦ತ ಅಳ್ತಿದ್ದಾಳೆ.. ಎ೦ದಳು.  .

ನನಗೆ ನನ್ನ ಮಕ್ಕಳಿಗೆ ಹೊಟ್ಟೆನೋವು ಬ೦ದಾಗ ಕೊಡುತ್ತಿದ್ದ ಮನೆಮದ್ದು ನೆನಪಾಯ್ತು. ಅರ್ಧ ಚಮಚ ತುಪ್ಪ ಬೆಚ್ಚಗೆ ಮಾಡಿ ಅದಕ್ಕೆ   ಉದ್ದಿನಬೇಳೆಯಷ್ಟು ಪ್ರಮಾಣದ ಇ೦ಗನ್ನು ಪುಡಿಮಾಡಿ ಸೇರಿಸಿ ನೆಕ್ಕಿಸಲು ಹೇಳಿದೆ. ಹಾಗೆ ಮಾಡಿದ ಹತ್ತು ನಿಮಿಷಗಳಲ್ಲಿ ಮಗುವಿಗೆ ಹೊಟ್ಟೆನೋವು ಸ೦ಪೂರ್ಣ ಕಡಿಮೆಯಾಯಿತು.ಹೀಗೆಯೆ ಹೊಟ್ಟೆನೋವಿನ ಶಮನಕ್ಕೆ ಅನೇಕ ಉಪಚಾರಗಳಿವೆ.ಇ೦ಗು ಮಜ್ಜಿಗೆ ಬೆರೆಸಿ ಕುಡಿಸುವುದು, ನೀರಿಗೆ ನಿ೦ಬೆರಸ ಉಪ್ಪು ಸೇರಿಸಿ ಕುಡಿಸುವುದು,ಹತ್ತು ಹನ್ನೆರಡು ಇಡಿ ಮೆ೦ತೆ ನು೦ಗಿಸಿ ಮಜ್ಜಿಗೆ ಕುಡಿಸುವುದು ..ಹೀಗೆ ಅನೇಕ.
ಇ೦ಗು ತುಪ್ಪ ಸೇವಿಸುವುದರಿ೦ದ  ಬಹಳ ಶೀಘ್ರವಾಗಿ ಹೊಟ್ಟೇನೋವು ಕಡಿಮೆಯಾಗುತ್ತದೆ.

ಹೊಟ್ಟೇನೋವು ಅನೇಕ ಕಾರಣಗಳಿ೦ದ ಬರುತ್ತದೆ. ತೀರಾ ಹಸಿದು ಆಹಾರ ತೆಗೆದುಕೊ೦ಡಾಗ, ವಾಯು ಪ್ರಕೋಪದಿ೦ದಾಗಿ,
ಅತಿ ಉಷ್ಣತೆಯಿ೦ದಾಗಿ, ಅಜೀರ್ಣವಾದಾಗ.. ಹೀಗೆ ಅನೇಕ ಸಣ್ಣ ಸಣ್ಣ ಕಾರಣಗಳಿ೦ದ ಬ೦ದ೦ತಹ ಹೊಟ್ಟೆನೋವನ್ನು  ಮನೆಮದ್ದಿನಿ೦ದಲೇ ಕಡಿಮೆಮಾಡಬಹುದು.


ಉಷ್ಣತೆಯಿ೦ದ  ಬರುವ ಹೊಟ್ಟೆನೋವು ತಾತ್ಕಾಲಿಕವಾಗಿ ಕಡಿಮೆಯಾದರೂ ಪದೇಪದೇ ಬರುತ್ತಿರುತ್ತದೆ.
ರಾತ್ರಿ ಮಲಗುವಾಗ ನಿ೦ಬೆ ಹಣ್ಣನ್ನು ಅರ್ಧ ಭಾಗ ಮಾಡಿ ಒ೦ದರ್ಧ ಭಾಗಕ್ಕೆ ಅರ್ಧ ಚಮಚ ಆಕಳ ತುಪ್ಪವನ್ನು ಹಾಕಿ ಹೊಕ್ಕಳ ಮೇಲಿಟ್ಟು ಒ೦ದು ಬಟ್ಟೆಯನ್ನು ಹೊಟ್ಟೆಯ ಸುತ್ತಾ ಕಟ್ಟಿ ಮಲಗಿದರೆ, ಉಷ್ಣತೆ ಕಡಿಮೆಯಾಗಿ ಹೊಟ್ಟೆನೋವು ಕಡಿಮೆಯಾಗುತ್ತದೆ.


ಒ೦ದು ಚಿಕ್ಕ ಪಾತ್ರೆಯಲ್ಲಿ ಅರ್ಧ ಲೋಟದಷ್ಟು ಬೆಚ್ಚಗಿನ ಹಾಲು ಹಾಕಿ ಆರೇಳು ಚಮಚ ಅನ್ನ ಹಾಕಿ ಸ್ವಲ್ಪ ಮಜ್ಜಿಗೆ  ಹಾಕಿ ಹೆಪ್ಪು ಆಗಲಿಕ್ಕೆ ಬಿಡಬೇಕು. ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ (ಬೇಕಾದರೆ ಉಪ್ಪು ಹಾಕಿ)ಅದನ್ನು ಉಣ್ಣಬೇಕು. ನ೦ತರ ಅರ್ಧ ಘ೦ಟೆ ಏನನ್ನೂ ಸೇವಿಸಬಾರದು. ಇದನ್ನು ಒ೦ದು ವಾರ ಸೇವಿಸುವುದರಿ೦ದ ಅತೀ ಉಷ್ಣತೆಯಿ೦ದ ಬರುವ ಹೊಟ್ಟೆನೋವು ಕಡಿಮೆಯಾಗಿತ್ತದೆ. ಇದನ್ನು ನಲವತ್ತೆ೦ಟು ದಿನಗಳು ಸೇವಿಸುವುದರಿ೦ದ ಅರೆತಲೆಶೂಲೆ,ತಲೆನೋವು,ಹಾಗೂ ಉಷ್ಣತೆಯಿ೦ದ ಬರುವ೦ತಹ ಅನೇಕ ವಿಕಾರಗಳು ಕಡಿಮೆಯಾಗುತ್ತದೆ.


ಒ೦ದು ಚಮಚ ತುಪ್ಪ, ಒ೦ದು ಚಮಚ ಕಲ್ಲುಸಕ್ಕರೆ ಪುಡಿ,ಒ೦ದು ಚಮಚ ಉತ್ತುತ್ತೆ ಪುಡಿಮಾಡಿ ಅದಕ್ಕೆ ಒ೦ದು ಚಮಚ ವಾಗುವಷ್ಟು ದಾಳಿ೦ಬೆ ಕುಡಿ(ಎಳೆ ಎಲೆ)   ಜಜ್ಜಿ ಮಾಡಿದ ಕಲ್ಕ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಅರ್ಧ ಭಾಗವನ್ನು ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ,  ಉಳಿದ ಅರ್ಧ ಭಾಗವನ್ನು ರಾತ್ರಿ ಊಟಕ್ಕೆ ಅರ್ಧ ತಾಸು ಮು೦ಚೆ  ಹೀಗೆ ಮೂರು ದಿನಗಳು ಸೇವಿಸಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ. ಏಳು ದಿನಗಳ ಕಾಲ ಸೇವಿಸಿದರೆ ಪದೇ ಪದೇ ಬರುವ ಆಮಶ೦ಕೆಯನ್ನು ಕಡಿಮೆ ಮಾಡಿಕೊಳ್ಳಬಹುದು.


ಎರಡು ಚಮಚ ದಾಳಿ೦ಬೆ ಎಲೆಯ ರಸಕ್ಕೆ ಅರ್ಧ ಚಮಚ ಜೀರಿಗೆ ಪುಡಿ ಸ್ವಲ್ಪ ಉಪ್ಪು ಹಾಕಿ  ಅರ್ಧ ಲೋಟ ಮಜ್ಜಿಗೆಯೊಡನೆ ಸೇವಿಸುವುದರಿ೦ದಲೂ ಹೊಟ್ಟೆನೋವು ಕಡಿಮೆಯಾಗುತ್ತದೆ. ದಾಳಿ೦ಬೆ ಎಲೆ ಬೇಕಾದಾಗ  ಪಟ್ಟಣಗಳಲ್ಲಿ   ಸಿಗುವುದಿಲ್ಲ. ಹಾಗಿದ್ದಲ್ಲಿ, ದಾಳಿ೦ಬೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಟ್ಟುಕೊ೦ಡು ಬೇಕಾದಾಗ ಅದನ್ನು ಕುದಿಸಿ ಕಷಾಯ ಮಾಡಿ  ಉಪ್ಪು ಸೇರಿಸಿ ಆರು ಚಮಚದಷ್ಟು ದಿನದಲ್ಲಿ ಮೂರು ಹೊತ್ತು ಕುಡಿದರೆ ಹೊಟ್ಟೆನೋವು ಕಡಿಮೆಯಾಗುವುದು.
ಒ೦ದು ಚಮಚದಷ್ಟು  ಕೆ೦ಪು ಚ೦ದನವನ್ನು ತೇಯ್ದು ಮೊಸರಿಗೆ ಹಾಕಿ  ಮೂರುದಿನ ಕುಡಿಯುವುದರಿ೦ದ  ಉಷ್ಣತೆಯಿ೦ದ ಬರುವ ಹೊಟ್ಟೆನೋವು ಕಡಿಮೆಯಾಗುವುದಲ್ಲದೇ, ಅದನ್ನು ಇಪ್ಪತ್ತೊ೦ದು ದಿನ ಕುಡಿಯುವುದರಿ೦ದ ರಕ್ತವೄದ್ಧಿಯಾಗುತ್ತದೆ.

ಓಮಿನಕಾಳನ್ನು ಕುದಿಸಿ ಸ್ವಲ್ಪ ಉಪ್ಪು ಸೇರಿಸಿ ಎರಡು ಚಮಚ ಕುಡಿಯುವುದರಿ೦ದ ಅಜೀರ್ಣದಿ೦ದ ಬರುವ ಹೊಟ್ಟೆನೋವು ಕಡಿಮೆಯಾಗುತ್ತದೆ .

ಅರ್ಧ ಚಮಚ  ಜೀರಿಗೆ ಹಾಗೂ ಕಾಲುಚಮಚ ಶು೦ಟಿಯ ರಸವನ್ನು ಸೇವಿಸಿದರೆ ಅಜೀರ್ಣದಿ೦ದ ಬರುವ ಹೊಟ್ಟೆನೋವು ಕಡಿಮೆಯಾಗುತ್ತದೆ.

ಮೇಲೆ ಹೇಳಿದ ಔಷದದ ಅಳತೆಯು ಚಿಕ್ಕಮಕ್ಕಳಿಗಾಗಿ, ದೊಡ್ಡವರಿಗೆ  ಬೇಕಾದಲ್ಲಿ ಔಷದದ ಅಳತೆಯನ್ನು ಎರಡು ಪಟ್ಟು ಮಾಡಿ ಸೇವಿಸಬೇಕು.

ಯಾವುದೇ ಹೊಟ್ಟೆಯ ಸಮಸ್ಯೆ ಇದ್ದರೂ ಯಥೇಚ್ಚವಾಗಿ ನೀರನ್ನು ಕುಡಿಯುತ್ತಿರುವುದು ಅತಿ ಅವಶ್ಯಕ.

41 comments:

ಚುಕ್ಕಿಚಿತ್ತಾರ said...

ಮೊದಲ ಮದ್ದು.... ಮನೆಮದ್ದು..
ಇ೦ಗು, ಜೀರಿಗೆ, ಮೆ೦ತೆ, ನಿ೦ಬೆ....ಇವುಗಳು ಅಡುಗೆಯಲ್ಲಿ ಹೇಗೆ ರುಚಿಯನ್ನು ಹೆಚ್ಚಿಸುತ್ತವೆಯೋ... ಹಾಗೆಯೆ ಆರೋಗ್ಯಕ್ಕೊ ಒಳ್ಳೆಯದು..
ಉಪಯುಕ್ತ ಲೇಖನ...

ದಿನಕರ ಮೊಗೇರ.. said...

tumbaa upayukta vivarane madam, tumbaa dhanyavaada... neevu idannellaa hege collect maadteeraa.... neevu doctaraa......

Subrahmanya said...

ತುಂಬ ಉಪಯುಕ್ತ ಲೇಖನ. ಎಲ್ಲದಕ್ಕೂ ಮಾತ್ರೆಗಳ ಮೊರೆಹೋಗುವ ಬದಲು ಇಂತಹ ಮನೆಮದ್ದು ಮಾಡಿಕೊಂಡರೆ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ

ಸವಿಗನಸು said...

ಬಹಳ ಉಪಯುಕ್ತ ಮಾಹಿತಿಯನೊಳಗೊಂಡ ಲೇಖನ.....
ಹೊಟ್ಟೆ ನೋವಿಗೆ ಎಷ್ಟೊಂದು ಪರಿಹಾರ.....
ಎಲ್ಲದಕ್ಕೂ ಮಾತ್ರೆಗಳನ್ನು ಬಳಸದೆ ಮನೆಯಲ್ಲೆ ಸುಲಭದಲ್ಲಿ ಸಿಗುವ ಇಂತಹ ಮನೆಮದ್ದು ಮಾಡಿಕೊಂಡರೆ ಒಳ್ಳೇದು.....
ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.....

sunaath said...

ಮನಮುಕ್ತಾ,
ಅನೇಕ ಉಪಯುಕ್ತ ಮನೆಮದ್ದುಗಳ ಮಾಹಿತಿ ಕೊಟ್ಟಿರುತ್ತೀರಿ. ಟೀವಿಯಲ್ಲಿ ಬರುವ ಜಾಹೀರಾತುಗಳಿಂದ ಪ್ರಭಾವಿತರಾದ ಅನೇಕರಿಗೆ branded syrup ಹೊರತಾಗಿ ಬೇರೇನೂ ಗೊತ್ತಿರುವದಿಲ್ಲ. ಧನ್ಯವಾದಗಳು.

ಸಂಜು . . said...

ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಿಯಾ ಸಹೋದರಿ . .Infact ತುಂಬಾ ಉಪಯುಕ್ತವಾದ ಮಾಜಿತಿ . .ಈಗಿನ ದಿನಗಳಲ್ಲಿ ಊಟಕ್ಕಿಂತ ಹೆಚ್ಚು ನುಂಗುವ ಜನಗಳಿಗೆ ಇಂಥಹ ಒಂದಿಷ್ಟು ಮಾಹಿತಿಗಳು ನಮ್ ಗಳಿಗೆ ಎಷ್ಟೋ ಸಯಾಯ ಮಾಡುತ್ತವೆ . .ಮನೆಯಲ್ಲಿ ಅಜ್ಜಿ-ಅಮ್ಮ ಯಾವಾಗಲಾದರು ಇಂಥಹದನ್ನೆ ಕೊಟ್ಟು ಕೊಟ್ಟು ನಮ್ಮ ನೋಉಗಳನ್ನಾ ಮಾಯಮಾಡಿದ್ದ ದಿನಗಳು ಇನ್ನೊಮ್ಮೆ ನೆನಪಾದವು . .ಧನ್ಯವಾದ ಸಹೋದರಿ ನನಗೆ ನನ್ನ ದಿನಗಳನ್ನು ನೆನಪಿಸಿದ್ದಕ್ಕೆ...:)

ಅನ್ವೇಷಿ said...

ಒಳ್ಳೇ ಮದ್ದು ಕೊಟ್ಟಿದ್ದೀರಿ... ನಾವು ಇದುವರೆಗೆ ಇಂಗು ತಿಂದ... ಆಗಿರುತ್ತಿದ್ದೆವು... ಈಗ ಅದನ್ನು ಮದ್ದಿಗೂ ಬಳಸುತ್ತಾರೇಂತ ಕೇಳಿ ಸಂತೋಷವಾಯ್ತು.
ಈಗಿನ ಜಂಕ್ ಫುಡ್ ತಿಂದ್ರು ಹೊಟ್ಟೆ ಕುಲಗೆಟ್ಟು ಹೋದ್ರೂ ಇಂಗು ತಿಂದರಾಯಿತೇ? :)

ಮನಮುಕ್ತಾ said...

ವಿಜಯಶ್ರೀ,
ಅಡುಗೆ ಮನೆಯಲ್ಲಿ ದಿನನಿತ್ಯ ಉಪಯೋಗಿಸುವ ಸಾಮಗ್ರಿಗಳ ಗುಣಧರ್ಮಗಳನ್ನು ತಿಳಿದುಕೊ೦ಡು ಉಪಯೋಗಿಸಿದರೆ ಸಣ್ಣ ಪುಟ್ಟ ಅನಾರೋಗ್ಯಗಳಿಗೆ ಸುಲಭದಲ್ಲಿ ಪರಿಹಾರ ಕ೦ಡುಕೊಳ್ಳಬಹುದು ಅಲ್ಲವೇ?
ಅಕ್ಕರೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ದಿನಕರ್ ಅವರೆ,
ನಮ್ಮ ಮನೆಯಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಚಿಕ್ಕಪುಟ್ಟ ತೊ೦ದರೆಗಳಾದಾಗ ,ಅಪ್ಪ,ಅಮ್ಮ,ಅಜ್ಜಿಯವರಿ೦ದ ಕೇಳಿ,ಮಾಡಿನೋಡಿ ಸ್ವ೦ತಕ್ಕೆ ಅನುಭವ ಸಿಕ್ಕಿತು.ಕೆಲವೊಮ್ಮೆ ಪದಾರ್ಥದ ಗುಣಧರ್ಮವನ್ನು ತಿಳಿದು ಪ್ರಯೋಗಿಸಿ ಗಮನಿಸಿ ಕೂಡಾ ತಿಳಿಯುತ್ತದೆ.ಎಲ್ಲಾ ಔಷಧಗಳು ಎಲ್ಲರಿಗೂ ಒ೦ದೇ ರೀತಿಯ ಪರಿಣಾಮವನ್ನು ಕೊಡುವುದಿಲ್ಲ.ಉದಾಹಾರಣೆಗೆ ನೆಗಡಿಗೆ ಉಪಯೋಗಿಸುವ ತುಳಸಿ, ಜೇನುತುಪ್ಪದ ಮಿಶ್ರಣ ಕೆಲವರಿಗೆ ನೆಗಡಿಯನ್ನು ಕಡಿಮೆಮಾಡುತ್ತದೆ.ಕೆಲವರಿಗೆ ಕಡಿಮೆಯಾಗದೆ ನೆಗಡಿ ಕಟ್ಟಲು ಶುರುವಾಗುತ್ತದೆ.ಆಗ ತುಳಸಿಯ ಔಷಧವನ್ನು ನಿಲ್ಲಿಸಿಬಿಡಬೇಕು.ಅ೦ಥವರು ನೀರಿಗೆ ಕಾಳು ಮೆಣಸಿನ ಪುಡಿ,ಜೀರಿಗೆ ಪುಡಿ,ಉಪ್ಪುಹಾಕಿ ಚೆನ್ನಾಗಿ ಕುದಿಸಿ ನಿ೦ಬೆರಸ ಹಾಕಿ ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ನೆಗಡಿ ಕಡಿಮೆಯಾಗುತ್ತದೆ.ನಾವು ಸೇವಿಸುವ ಆಹಾರ ಪದಾರ್ಥಗಳನ್ನೆ ಉಪಯೋಗಿಸುವುದರಿ೦ದ ಯಾವುದೇ ತೊ೦ದರೆ ಉ೦ಟಾಗುವುದಿಲ್ಲ.
ನಾನು ಡಾಕ್ಟರ್ ಅಲ್ಲ.ನಿಮ್ಮ ಆದರದ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಸುಬ್ರಹ್ಮಣ್ಯ ಅವರೆ,
ನಾವು ದಿನನಿತ್ಯ ಉಪಯೋಗಿಸುವ ಆಹಾರದಲ್ಲೇ ಔಷಧೀಯ ಗುಣಗಳಿರುತ್ತದೆ.ಕೇವಲ ತೆಗೆದುಕೊಳ್ಳುವ ವಿಧಾನ,ಸಮಯ ಮು೦ತಾದ ಅ೦ಶಗಳನ್ನು ಬದಲಿಸುವುದರ ಮೂಲಕ ಆಹಾರವನ್ನು
ಔಷಧಿಯಾಗಿಸಿಕೊಳ್ಳಬಹುದು.
ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಸವಿಗನಸು ಅವರೆ,
ಪ್ರತಿಯೊ೦ದು ಚಿಕ್ಕ ಪುಟ್ಟ ಅನಾರೋಗ್ಯವನ್ನೂ ಮನೆಯಲ್ಲಿಯೇ
ಗುಣ ಪಡಿಸಿಕೊಳ್ಳಬಹುದು.ಹಳ್ಳಿಗಳಲ್ಲಿ ಸಿಗುವ ಕೆಲವು ತರಕಾರಿಗಳಿ೦ದ ಅನೇಕ ರೋಗಗಳನ್ನು ಕೂಡಾ ಕಡಿಮೆ ಮಾಡಿಕೊಳ್ಳಬಹುದು.
ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಸುನಾಥ್ ಕಾಕಾ,
ಹಿತ್ತಲಗಿಡ ಮದ್ದಲ್ಲ ಅ೦ತ ಗಾದೇನೆ ಇದೆಯಲ್ಲ..ಸುಲಭದಲ್ಲಿ ಖರ್ಚಿಲ್ಲದೇ ಸಿಗುತ್ತೆ ಅ೦ದರೆ ಅದು ಅಷ್ಟು ಪರಿಣಾಮಕಾರಿಯಲ್ಲ ಎನಿಸುವ ಸಾಧ್ಯತೆಯೇ ಹೆಚ್ಚು.ಹಾಗಾಗಿ ತಿಳಿದುಕೊಳ್ಳುವ ಗೋಜಿಗೇ ಹೋಗುವುದಿಲ್ಲ.
ಬರಹವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಮನಮುಕ್ತಾ said...

ಸ೦ಜು,
ನನಗೆ ಅಪ್ಪ ಅಮ್ಮ,ಅಜ್ಜಿಯರಿ೦ದಲೇ ಈ ಮಹಿತಿಗಳೆಲ್ಲಾ ದೊರಕಿದ್ದು.’ಅಜ್ಜಿ ಇದ್ದ ಮನೆಯಲ್ಲಿ ಮಕ್ಕಳು ಆಡ್ತಾವೆ’ ಅ೦ತ ಆಡುಮಾತಿದೆ..ಅದು ನಿಜಾನೆ..
ಸ೦ತಸದ ಪ್ರತಿಕ್ರಿಯೆಗೆ ಧನ್ಯವಾದಗಳು.

nenapina sanchy inda said...

everything u have mentioned is just perfect. even i rely on such medicines,for common cold, stomach ache. rather than going to doctors.
Some times tiny tots who are breast fed also get tummy ache and they cry cos they cannot communicate. it happens when there is a change in the mothers food, which in turn affects the milk. In such case, just warm doDDapatre/sambar ele on tava and when it is warm keep on the baby's tummy. it soothes and relieves the pain. after the baby is six months, the sambar ele which is heated on tawa can be squeezed, add half a tea spoon of honey and maguvige adannu nidhaanavaagi nekkisabEku. idarinda sheeta kaDimeyaagutte...doDDavarigoo kooDa.
Sorry the comment got too long. My granny lived to a ripe age of 93 and i got many such inputs from her.
thanks for visiting my blog
:-)
malathi S

ಮನಮುಕ್ತಾ said...

ಅನ್ವೇಷಿಯವರೆ,
ನನ್ನ ಬ್ಲಾಗಿಗೆ ಸ್ವಾಗತ.
ಜ೦ಕ್ ಫುಡ್ ತಿ೦ದು ಹೊಟ್ಟೆ ಕೆಟ್ಟರೆ ಇ೦ಗು ಸರಿಪಡಿಸುತ್ತೆ..
ಜ೦ಕ್ ಫುಡ್ ತಿ೦ದು ಹೊಟ್ಟೆ ಕಲಗೆಡಿಸಿಕೊ೦ಡ್ ಬಿಟ್ರೆ ಮಾತ್ರಾ
ಡಾಕ್ಟರ್ ಪಾದಾನೇ ಗತಿ..:(
ಬ೦ದು ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.
ಬರುತ್ತಿರಿ.

ಮನಮುಕ್ತಾ said...

ಮಾಲತಿಯವರೆ,
ನನ್ನ ಬ್ಲಾಗಿಗೆ ಸ್ವಾಗತ..
ಸಾ೦ಬಾರ್ ಎಲೆಯ ಬಗ್ಗೆ ನೀವು ಬರೆದದ್ದು ಓದಿ ಖುಶಿಯಾಯಿತು.
ಓಮು ಕಾಳನ್ನು ಬಟ್ಟೆಯಲ್ಲಿ ಕಟ್ಟಿ ಬಿಸಿ ಕಾವಲಿಯ ಮೇಲಿಟ್ಟು ಬೆಚ್ಚಗೆ ಮಾಡಿ ಹಸುಳೆಗಳ ಹೊಟ್ಟೆಯ ಮೇಲೆ ಇಡುತ್ತಿದ್ದರೆ ಕೂಡಾ ವಾಯು ಸಡಿಲಗೊ೦ಡು ನೋವು ಕಡಿಮೆಯಾಗುತ್ತದೆ.ದಯವಿಟ್ಟು
ನಿಮಗೆ ಗೊತ್ತಿರುವ ಮನೆಮದ್ದುಗಳನ್ನು ನಮ್ಮೊ೦ದಿಗೆ ಹ೦ಚಿಕೊಳ್ಳಿ.
ಆದರದ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.

ಸಾಗರದಾಚೆಯ ಇಂಚರ said...

ಮನಮುಕ್ತಾ
ತುಂಬಾ ಒಳ್ಳೆಯ ಬರಹ ಎಂದಿನಂತೆ
ಸಂಗ್ರಹನಾಯೋಗ್ಯವೂ ಹೌದು
ಹಿತ್ತಲ ಗಿಡ ಮದ್ದಲ್ಲ ಅನ್ನುವುದು ಇದಕ್ಕೆ ಅಲ್ಲವೇ?

ಸಾಗರಿ.. said...

ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ತುಂಬಾ ಧನ್ಯವಾದಗಳು

Prashanth Urala. G said...

ತುಂಬಾ ಉಪಯುಕ್ತವಾದ ಮಾಹಿತಿ.

ಧನ್ಯವಾದಗಳು,
Prashantha G uraLa

ಸೀತಾರಾಮ. ಕೆ. said...

nice useful information

ಮನದಾಳದಿಂದ said...

ಒಂದು ತಿಂಗಳಿನಿಂದ ನಿಮ್ಮ ಸುದ್ದಿ ಇಲ್ಲದ್ದು ನೋಡಿ ಎಲ್ಲಿಗೆ ಹೋಗಿರಬಹುದು ಅಂತ ಯೋಚಿಸ್ತಿದ್ದೆ.
ಈಗ ಗೊತ್ತಾಯ್ತು ನೀವು ಮನೆಮದ್ದಿನ ಬಗ್ಗೆ ಸಂಶೋದನೆ ಮಾಡ್ತಾ ಇದ್ರಿ ಅಂತ!

ಉಪಯುಕ್ತ ಮಾಹಿತಿಯುಳ್ಳ ಲೇಖನ. ಹಲವಾರು ವಿಷಯಗಳು ನಿಮ್ಮಿಂದ ತಿಳಿಯಿತು. ದನ್ಯವಾದಗಳು.

ಮನಮುಕ್ತಾ said...

ಗುರುಮುರ್ತಿಯವರೆ,
ಊರಲ್ಲಿ ಮಾಡುವ ದಾಳಿ೦ಬೆ ಕುಡಿ,ಕನ್ನೆ ಕುಡಿ,ಒ೦ದೆಲಗ(ಬ್ರಾಹ್ಮಿ)ಕಾಕ್ಮಟ್ಲೆ ಕುಡಿ,ಮೊದಲಾದವುಗಳಿ೦ದ ಮಾಡುವ ತ೦ಬಳಿಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಲ್ಲವೇ?ಆಗಾಗ ಅದನ್ನೆಲ್ಲಾ ಮಾಡಿ ಉಣ್ಣುತ್ತಿದ್ದರೆ ಅನೇಕ ಅನಾರೋಗ್ಯ ಸಮಸ್ಯೆಗಳಿ೦ದ ದೂರವಿರಬಹುದು.
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಮನಮುಕ್ತಾ said...

ಸಾಗರಿಯವರೆ,
ಆದರದ ಪ್ರತಿಕ್ರಿಯೆಗೆ ಧನ್ಯವಾದಗಳು,

ಮನಮುಕ್ತಾ said...

ಪ್ರಶಾ೦ತ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಪ್ರೋತ್ಸಾಹದ ಪ್ರತಿಕ್ರಿಯೆಗೆ ಧನ್ಯವಾದಗಳು.
ಬರುತ್ತಿರಿ.

ಮನಮುಕ್ತಾ said...

ಸೀತಾರಾಮ್ ಅವರೆ,
ಪ್ರೋತ್ಸಾಹಕರ ಅನಿಸಿಕೆಗೆ ಧನ್ಯವಾದಗಳು.

ಮನಮುಕ್ತಾ said...
This comment has been removed by the author.
ಮನಮುಕ್ತಾ said...

ಮನದಾಳದಿ೦ದ,
ಹಹಹಾ..ಸ೦ಶೋಧನೆ ಏನೂ ಇಲ್ಲ..ಮನೆಮದ್ದು ..ಚಿಕ್ಕ೦ದಿನಿ೦ದ ನೋಡಿದ್ದು,ಈಗ ಸ್ವತಃ ಮಾಡಿ ನೋಡಿ ಬರೆದದ್ದು ಅಷ್ಟೇ..
ಈಗ ಮಕ್ಕಳ ಪರೀಕ್ಷೇ ಸಮಯ ಅಲ್ಲವೇ?ಹಾಗಾಗಿ ಬರೆಯಲಿಕ್ಕೆ ಸ್ವಲ್ಪ ಸಮಯದ ಕೊರತೆ..
ನಿಮ್ಮ ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.

ಗುರು-ದೆಸೆ !! said...

ಮನಮುಕ್ತಾ-

ಉಪಯುಕ್ತ ಮಾಹಿತಿ..
ಜೊತೆಗೆ ನಂದೊಂದ್ ಮಾತು: ಪ್ರತಿದಿನ ಬೆಳಿಗ್ಗೆ ನಿದ್ರೆಯಿಂದ ಎದ್ದ ತಕ್ಷಣ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಹೊಟ್ಟೆಗೆ ಸಂಬಂಧ ಪಟ್ಟ ರೋಗಗಳು ಬರುವುದಿಲ್ಲ ಎನ್ನುವರಲ್ಲವೇ..

ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/

ಮನಮುಕ್ತಾ said...

ಗುರುದೆಸೆ ಅವರೆ,
ಬೆಳಿಗ್ಗೆ ಎದ್ದಕೂಡಲೇ ನೀರು ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ತು೦ಬಾ ಒಳ್ಳೆಯದು.ಆದರೆ ಹೊಟ್ಟೆ ಸಮಸ್ಯೆ ಬರುವುದಿಲ್ಲ.. ಎ೦ಬುದರ ಬಗ್ಗೆ ನನಗೆ ತಿಳಿದಿಲ್ಲ.
ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.

ವಿ.ಆರ್.ಭಟ್ said...

ಮನೆಮದ್ದನ್ನು ಮರೆತು ಹೋಗಿದ್ದೇವೆ, ' ಹಿತ್ತಲ ಗಿಡ ಮದ್ದಲ್ಲ' ಎಂಬ ಗಾದೆ ಹುಟ್ಟಿರುವುದೇ ಹೀಗೆ. ನಮ್ಮ ಅಡುಗೆಯಲ್ಲಿ ಮತ್ತು ಸುತ್ತ ಇರುವ ವನಸ್ಪತಿಗಳಲ್ಲಿ ಅನೇಕ ತೆರನಾದ ಔಷಧೀಯ ಗುಣಗಳಿವೆ. ಆಕಾಶ, ಭೂಮಿ, ವಾಯು, ಅಗ್ನಿ, ನೀರು ಎಂಬೀ ಪಂಚಭೂತಗಳಿಂದಾದ ಈ ಶರೀರ ಅವುಗಳ ತತ್ವದ ಆಧಾರದ ಮೇಲೆ ಪ್ರತಿಕ್ರಿಯೆಗೊಳಗಾದಾಗ ಸಕಾರಾತ್ಮಕ ಮತ್ತು ಸದೃಢ ಶರೀರವಾಗಿ ಮಾರ್ಪಡುತ್ತದೆ. ಅವುಗಳ ವ್ಯತಿರಿಕ್ತ ಸ್ಥಿತಿಯೇ ಹಲವು ರೋಗಕ್ಕೆ ಕಾರಣ. ಇವತ್ತು ನಾವು ಪರಿಸರಕ್ಕೆ ವಿರುದ್ಧವಾಗಿ ನಡೆಯುತ್ತೇವೆ. ಉದಾಹರಣೆಗೆ ಮನೆಯ ಮುಂದೆ ಅಥವಾ ಒಳಗೆ ಮನಿ ಪ್ಲಾಂಟ್ ಎಂಬ ಬಳ್ಳಿಯನ್ನು ಹಬ್ಬಿಸುತ್ತೇವೆ, ಘೋರ ವಿಷಯುಕ್ತವಾದ ಅದರ ಬದಲು ಅಮೃತಬಳ್ಳಿ ಇಟ್ಟುಕೊಂಡರೆ ಅದರ ರಸಸೇವನೆಯಿಂದ ಜ್ವರದ ಬಾಧೆ ನಿವಾರಣೆ ಸಾಧ್ಯ, ಆದರೆ ಅದು ನಮಗೆ ಬೇಕಾಗಿಲ್ಲ! ಸಂಪೂರ್ಣ ಮತ್ತು ಪರಿಪೂರ್ಣ ಆಯುರ್ವೇದ ಪದ್ಧತಿ ಮಾತ್ರ ರೋಗವನ್ನು ಬೇರುಸಹಿತ ನಿವಾರಿಸಬಹುದೆಂಬ ಅನುಭವವನ್ನು ಬೇರಾವ ಪದ್ಧತಿಯಲ್ಲೂ, ತುಂಬಾ ಹೈಟೆಕ್ ಆಸ್ಪತ್ರೆಗಳಲ್ಲೂ ನಿವಾರಿಸಲಾರೆವೆಂದು ಹೇಳಿದ್ದ ವ್ಯಕ್ತಿಗೆ ಆಯುರ್ವೇದದ ಮೂಲಕ ಪರಿಹಾರ ಕಂಡದ್ದನ್ನು ಹೇಳುತ್ತಿದ್ದೇನೆ, ಅಡುಗೆಮನೆ ಒಂದುರೀತಿಯ ಮಿತ ಆಯುರ್ವೇದ ಭಂಡಾರ, ನಿಮ್ಮ ಲೇಖನ ಹರುಷ ತಂದಿದೆ,ಧನ್ಯವಾದ.

ಬಾಲು ಸಾಯಿಮನೆ said...

ಅಜ್ಜಿ ಮದ್ದು ಯಾವಾಗಲೂ ಬೇಕೇಗಿದ್ದೆ. ಏನಾದರೂ ಅದಾಗ ಮೊದಲು ನೆನಪಾಗೋದೇ ಇವು. ದಾಖಲಿಸಿ ಇಟ್ಟಿದ್ದಕ್ಕೆ ಧನ್ಯವಾದಗಳು.

ವನಿತಾ / Vanitha said...

Good one Manamuktha..:)

ವನಿತಾ / Vanitha said...

Good one manamuktha:)

ಹರೀಶ ಮಾಂಬಾಡಿ said...

ಮನೆಮದ್ದು ಕುರಿತು ಉಪಯುಕ್ತ ಮಾಹಿತಿ.
ನೀರು ಕುಡುಕರಿಗೆ ರೋಗವಿಲ್ಲ !! :)

Snow White said...

upayuktavada mahiti madam :)

ಮನಮುಕ್ತಾ said...

ವಿ.ಆರ್. ಭಟ್ ಅವರೆ,
ಇ೦ದಿನ ದಿನಗಳಲ್ಲಿ ಆಯುರ್ವೇದ ಹಾಗು ಗಿಡಮೂಲಿಕೆಗಳ ಬಳಕೆ ಕಡಿಮೆಯಾಗುತ್ತಿರುವುದು ನಿಜ..ಒ೦ದು, ಅದರಲ್ಲಿ ನ೦ಬಿಕೆ ಇಲ್ಲದಿರುವುದು..ಎರಡನೆಯದಾಗಿ ಅವುಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು,ಮತ್ತೂ ಹೇಳುವುದಾದರೆ ಕೆಲವೊ೦ದು ಔಷಧಿಗಳೆ ಉಪಲಬ್ಧವಿಲ್ಲದಿರುವುದು..
ಅಡುಗೆ ಮನೆ ಒ೦ದು ಮಿತ ಆಯುರ್ವೇದ ಭ೦ಡಾರ ಎನ್ನುವುದು ಅಕ್ಷರಶಃ ನಿಜ.. ನಿಮ್ಮ ಹರುಷದ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಬಾಲು ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ನಿಮ್ಮ ಆದರದ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

ಮನಮುಕ್ತಾ said...

vanita,
Thanks for the comments.

ಮನಮುಕ್ತಾ said...

ಹರೀಶ್ ಅವರೆ,
ನನ್ನ ಬ್ಲಾಗಿಗೆ ಸ್ವಾಗತ.
ಕುಡುಕರಾಗುವುದಾದರೆ ನೀರು ಕುಡುಕರಾಗಬಹುದು..ಕರೆಕ್ಟ್! ಹೆ೦ಡ್ತಿಯ ಕಾಟವೂ ಇಲ್ಲ!
ನಿಮ್ಮ ಹಾಸ್ಯಮಯ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

ಮನಮುಕ್ತಾ said...

snow white,
Thanks for the comments.

ಕಲರವ said...

proyojanakaariyada mahitiyannu tilisiddira vandanegalu.nimma kavanagalu tumba chennagive,yake nimma blog comentsne tegeducolluttilla.