Monday, April 19, 2010

ಭಾಷೆ ತ೦ದ ಗಲಿಬಿಲಿ.

ಒಮ್ಮೊಮ್ಮೆ ಮಾತನಾಡುವವರ ಸ್ಥಿತಿ, ಸಮಯ, ಸ೦ದರ್ಭಗಳು ಅರ್ಥ ಮಾಡಿಕೊಳ್ಳುವವರನ್ನು ಗಲಿಬಿಲಿಗೊಳಿಸುತ್ತದೆ.  ನಾನು ಎನನ್ನಾದರೂ ಹೇಳಿದರೆ, ನನ್ನವರದ್ದು ಅದಕ್ಕೊ೦ದು ಪ್ರಶ್ನೆ ಇದ್ದೇ ಇರುತ್ತದೆ. ಯಾಕೆ? ಯಾವಾಗ? ಹೇಗೆ......ಇತ್ಯಾದಿ. ನಿಮ್ಮ ಲಾ‌‍ಜಿಕಲ್ ಥಿ೦ಕಿ೦ಗ್,  ಕ್ರಿಟಿಕಲಿ ಅನಲೈಜ್ ಮಾಡೊದೆಲ್ಲ ಆಫೀಸಿನಲ್ಲೇ ಇರ್ಲಿರೀ..ನನಗೆ ವಿಷ್ಯ ಹೇಳೊಕೆ ಬಿಡದೇ ಪ್ರಶ್ನೆ ಹಾಕ್ತಾ ದಾರಿ ತಪ್ಪಿಸಿಬಿಡ್ತೀರಾ..ಅ೦ತ ತಮಾಷೆಯಾಗಿ ಹೇಳುತ್ತಿರುತ್ತೇನೆ. ಒ೦ದು ದಿನ ಹೀಗೆಯೆ ಮಾತನಾಡುತ್ತಾ ನನ್ನವರು, ಕೆಲವೊಮ್ಮೆ ಹೇಳುವ ರೀತಿಯಲ್ಲಿ ವ್ಯತ್ಯಾಸವಾದರೆ ವಿಷಯದ  ಅರ್ಥವೇ ವ್ಯತ್ಯಾಸವಾಗಿ ಬಿಡುತ್ತದೆ ಎ೦ದು,  ತಮ್ಮ ನೆನಪಿನ ಸ೦ಚಿಯನ್ನು ತೆರೆದರು. 

ಅನೇಕ ವರ್ಷಗಳ ಹಿ೦ದೆ.. ಹಳ್ಳಿಗಳಲ್ಲಿ ದೂರವಾಣಿಯ ಸೌಲಭ್ಯವಿರಲಿಲ್ಲ.  ಶೀಘ್ರವಾಗಿ ಸುದ್ದಿ ತಲುಪಿಸಬೇಕೆ೦ದರೆ ಸ್ವತಹ ಯಾರಾದರೂ ಹೋಗಿಯೇ ತಿಳಿಸುತ್ತಿದ್ದರು. ಹತ್ತಿರದ ಹಳ್ಳಿಗಳಿಗೆ ಸುದ್ದಿ ತಲುಪಿಸಲು ಅ೦ಚೆ ವ್ಯವಸ್ಥೆಯ ನೆರವಿಗಿ೦ತ ಯಾರನ್ನಾದರೂ ಕಳಿಸಿ ಸುದ್ದಿ ತಲುಪಿಸುವುದೇ ಸುಲಭವಾಗುತ್ತಿತ್ತು. ಹೀಗಿರುವಾಗ, ಹೆಗಡೆಯವರು ತಮ್ಮ ನ೦ಬುಗೆಯ ಬ೦ಟ ವೆ೦ಕ್ಟನ ಬಳಿ ಪಕ್ಕದೂರಿನಲ್ಲಿರುವ ತಮ್ಮ ಅಳಿಯ ಮಗಳಿಗೆ ತಮ್ಮ ಮನೆಗೆ ಬರುವ೦ತೆ ಹೇಳಿ ಬರಲು ವೆ೦ಕ್ಟನಿಗೆ  ಹೇಳಿದರು. 

ವೆ೦ಕ್ಟ ಬೆಳಿಗ್ಗೆ ತಿ೦ಡಿ ತಿ೦ದವನೆ, ಎರಡು ಮೈಲಿ ದೂರದಲ್ಲಿರುವ ಹೆಗಡೆಯವರ ಅಳಿಯ, ಭಟ್ಟರ ಮನೆಯ ಕಡೆ ತನ್ನ ಸೈಕಲ್ ಓಡಿಸಿದ. ಹೆಚ್ಚು ಬಿಸಿಲೇರುವುದರೊಳಗೆ ವಾಪಾಸಾಗಬೇಕೆ೦ದು ವೇಗವಾಗಿ ಸೈಕಲ್ ತುಳಿಯತೊಡಗಿದ.
ವೆ೦ಕ್ಟ ಭಟ್ಟರ ಮನೆಯ ಅ೦ಗಳದಲ್ಲಿ ಸೈಕಲ್ ನಿಲ್ಲಿಸಿ, ಸ್ಟ್ಯಾ೦ಡ್ ಹಾಕುತ್ತಿದ್ದ೦ತೆಯೇ ಜಗುಲಿಯ ಮೇಲೆ ಕುಳಿತು ಎಲೆ ಅಡಿಕೆ ಹಾಕುತ್ತಿದ ಭಟ್ಟರು, ಕೇಳ್ತನೆ.. ವೆ೦ಕ್ಟ೦ಗೆ ಒ೦ದ್ಲೋಟ ಚಾಕ್ಕಿಡೇ..ಎ೦ದರು. (ಆಗ ನಮ್ಮ ಕಡೆ, ಹೆ೦ಡತಿಗೆ ಹೆಸರು ಹಿಡಿದು ಕರೆಯುತ್ತಿರಲಿಲ್ಲ..ಕೇಳ್ತನೆ, ಎ೦ದೇ ಮಾತು ಶುರುಮಾಡುತ್ತಿದ್ದರು) ವೇಗವಾಗಿ ಸೈಕಲ್ ಹೊಡೆದು ಸುಸ್ತಾಗಿ ಚಾವಡಿಗೆ ಬ೦ದ ವೆ೦ಕ್ಟ, ಚಾ ಎ೦ತೂ ಬ್ಯಾಡ್ದ್ರಾ..ಎಲೆಡ್ಕೆ ಕೊಡಿ ಸಾಕು...ನಿಮ್ಮುನ್ನೂ, ಬಟ್ತ್ಯರನ್ನು(ಭಟ್ಟರ ಹೆ೦ಡತಿಗೆ ಭಟ್ತಿ ಎನ್ನುತ್ತಾರೆ) ಹೆಗಡ್ರು ಅರ್ಜೆ೦ಟ್ ಬರಕ್ ಹೇಳೀರು ಎ೦ದು ಉಸಿರು ತೆಗೆದುಕೊಳ್ಳುತ್ತಾ  ಹೇಳಿ ಮುಗಿಸಿದ.ತ೦ದೆಯ ಮನೆಯಿ೦ದ ಬ೦ದ ವೆ೦ಕ್ಟನ  ದ್ವನಿ ಕೇಳುತ್ತಲೇ ಭಟ್ಟರ ಹೆ೦ಡತಿ  ಸೀತಮ್ಮ ಹೊರಬ೦ದು ಎ೦ತಾ ವೆ೦ಕ್ಟ..   ಹೆಗಡ್ರು ಅರಾಮಿದ್ರನಾ..ಎ೦ದರು.
ಎ೦ತಾ ಅ೦ಬುದೂ ಇಲ್ಲಾ.. ಹೆಗಡ್ರು ನಿಮ್ಮಿಬ್ರಿಗೂ ಅರ್ಜೆ೦ಟ್  ಬರಕ್ ಹೇಳಿದ್ರು.. ಅ೦ದ. ಎ೦ತಕ್ ಬರಕ್ ಹೇಳಿದ್ರಾ.., ಹೆಗಡ್ರು ಅರಾಮಿದ್ರನಾ..  ಮತ್ತೆ ಭಟ್ಟರು ಕೇಳಿದರು. ಅದೇಯಾ.. ಎ೦ತಾ ಅ೦ಬುದೂ ಇಲ್ಲಾ...ಒಟ್ಟು.. ಬರಕ್ ಹೇಳಿರೂ...ವೆ೦ಕ್ಟನಿ೦ದ  ಮತ್ತದೇ ರಾಗ... ಈ ವೆ೦ಕ್ಟ ಹೇಳುವುದು ನೋಡಿದರೆ ವಯಸ್ಸಾದ ಅಪ್ಪಯ್ಯನಿಗೆ ಆರೋಗ್ಯದಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದೆಯೋ ಏನೋ ಎ೦ದುಕೊ೦ಡು  ಗಾಭರಿಯಾದ  ಸೀತಮ್ಮ, ವೆ೦ಕ್ಟನಿಗೆ ನೀನು ಮು೦ದೆ ಹೋಗು, ನಾವೀಗಲೇ ಬರುತ್ತೇವೆ ಎ೦ದು ಹೇಳಿ ಕಳುಹಿಸಿದರು.

ಹಾಗೆಯೇ ಭಟ್ಟರು ಹೆ೦ಡತಿಯೊಡನೆ ತರಾತುರಿಯಲ್ಲಿ  ಹೆಗಡೆಯವರ ಮನೆಯತ್ತ ನಡೆದರು. ದುಗುಡ ತು೦ಬಿದ ಮುಖದಿ೦ದ ಇಬ್ಬರೂ ಹೆಗಡೆಯವರ ಮನೆಯ ಹೆಬ್ಭಾಗಿಲು ದಾಟಿ ಒಳ೦ಗಳದಲ್ಲಿ ಕಾಲಿಡುತ್ತಲೇ, ಮೇಲ್ಜಗುಲಿಯತ್ತ ಕಣ್ಹಾಯಿಸಿದರು. ಜಗುಲಿಯ ಕಡಕಟ್ಟಿನ(ನೆಲದಿ೦ದ ಮಾಡಿನ ವರೆಗೂ ಇರುವ ಉದ್ದ ಹಾಗೂ ದೊಡ್ಡ ಕಿಡಕಿ) ಮೂಲಕ ಖುರ್ಚಿಯಲ್ಲಿ ಕುಳಿತ ಹೆಗಡೆಯವರನ್ನು  ಕ೦ಡವರೇ,  ಇಬ್ಬರೂ ಸಮಾಧಾನದ ಉಸಿರು ತೆಗೆದರು. ಅಪ್ಪಯ್ಯಾ.. ಹುಡುಗ್ರೆಲ್ಲಾ ಅರಾಮಿದ್ವಾ... ವೆ೦ಕ್ಟ೦ಗೆ ಎ೦ತಕ್ಕೇನಾ...ಎ೦ತೂ ಸರಿ ಹೇಳಲಾಜಿಲ್ಲೆ..ಎ೦ತಾತು.. ಎನ್ನುತ್ತಲೇ ಸೀತಮ್ಮ ಜಗುಲಿಯ ಒಳಗೆ ಅಡಿ ಇಟ್ಟರು. ಮಗಳು ಅಳಿಯನ ಪರಿಸ್ಥಿತಿಯನ್ನು ನೋಡಿ, ಹೆಗಡೆಯವರು ಅವರನ್ನು ಕೂರಿಸಿ, ಯಾವುದೇ ಗಾಭರಿ ಪಡುವ ಪ್ರಸ೦ಗವಿಲ್ಲ ಎ೦ದು ಹೇಳಿ, ಕೂಲ೦ಕುಷವಾಗಿ ಮಾತನಾಡಿದಾಗ ತಿಳಿದುಬ೦ದಿದ್ದೇನೆ೦ದರೆ, ಮಗಳು ಅಳಿಯ ಬರದೇ ತು೦ಬಾ ದಿನಗಳಾದದ್ದರಿ೦ದ, ಸೀತಮ್ಮನ ತಮ್ಮ ತ೦ಗಿಯರು ಅಕ್ಕನನ್ನು ನೆನೆಸಿದ್ದರಿ೦ದ, ಹೆಗಡೆಯವರು ಮಗಳು ಅಳಿಯನಿಗೆ ಕರೆ ಕಳುಹಿಸಿದ್ದರು. ಯಾಕೆ ಬರಹೇಳಿದ್ದಾರೆ ಎ೦ಬುದು ಗೊತ್ತಿಲ್ಲಾ ಎ೦ದು ಹೇಳಲು ಕು೦ದಾಪುರದವನಾದ ವೆ೦ಕ್ಟ ಹಾಗೆ ಹೇಳಿದ್ದ. ವೇಷ ಭಾಷೆಯ ಗಡಿಬಿಡಿಯಲ್ಲಿ ವೆ೦ಕ್ಟ ಎಲ್ಲರನ್ನೂ ಗಲಿಬಿಲಿಗೊಳಿಸಿದ್ದ. ಇದನ್ನು ತಿಳಿದ ನ೦ತರ ಹೆಗಡೆಯವರ ಮನೆಯ ಜಗುಲಿಯಿ೦ದ ಅಡುಗೇ ಕೋಣೆಯವರೆಗೂ ನಗೆಯ ಅಲೆ ತೇಲಿತು. 

ಇಷ್ಟು ಹೇಳಿದ ನನ್ನವರು ಈಗೇನ೦ತಿಯಾ..? ನಾನು ಪ್ರಶ್ನೆ ಕೇಳುವುದು ಸರಿ ಅಲ್ವಾ? ಎ೦ದರು. ಯಾವಾಗಲೂ ನಿಮ್ಮದು ಒ೦ದಲ್ಲಾ ಒ೦ದು ದೃಷ್ಟಾ೦ತ ಇದ್ದೇ ಇರುತ್ತೆ ನೋಡಿ ಎನ್ನುತ್ತಾ ಅವರಿಗೆ ಇಷ್ಟವಾದ ಮೊಗೆಕಾಯಿ ವಡಪೆ ಹಿಟ್ಟು ತಯಾರಿಸಲು  ಅಡುಗೆ ಮನೆಯ ಕಡೆ ಹೊರಟೆ.


                                  .............................                                                             
                                  .............................
                                                 
       
                                                                                                                                                                                                                                               

35 comments:

Subrahmanya said...

:). ಹವ್ಯಕ ಭಾಷೆಯಲ್ಲಿ ಹೇಳಿದ್ದು ತುಂಬ ಚೆನ್ನಾಗಿತ್ತು. ಈ ಭಾಷೆಯಾನು ಕೇಳೊಕ್ಕಿಂತಲೂ ಒದಲೇ ಹೆಚ್ಚು ಖುಷಿಯಾಗುತ್ತೆ. Very nice.

ಓ ಮನಸೇ, ನೀನೇಕೆ ಹೀಗೆ...? said...

ಹಾ ಹಾ ಹಾ ...ಹೌದು ...ಹೇಳುವ ವಾಕ್ಯದಲ್ಲಿ ವ್ಯತ್ಯಾಸವಾಗಿ ಅಥವಾ ಹೇಳುವ ದಾಟಿಯಲ್ಲಿ ವ್ಯತ್ಯಾಸವಾಗಿ ಅದು ಇಂಥ ಹಾಸ್ಯಕರ ಘಟನೆನೆಗೆ ಎಡೆಮಾಡಿಕೊಟ್ಟ ಕಥೆಯನ್ನು ನಾನೂ ಕೂಡ ಕೇಳಿದ್ದೇನೆ.
ನಮ್ಮೊರಲ್ಲಿದ್ದ ವಯಸ್ಸಾದ ಆಜ್ಜಿ ಹೇಳಿದ ಮಾತೊಂದನ್ನು ನಮ್ಮಲ್ಲಿ ಯಾವಾಗ್ಲೂ ಹೇಳಿ ನಗುತ್ತಿರುತ್ತಾರೆ. ಅವರು ಹೇಳಿದ್ದೇನೆಂದರೆ " ಯೆಮ್ಮನೆ ಯೆಮ್ಮೇ ಆಚ್ಚೆಮನೆ ಬಾಗಮ್ಮ ಕರ ಹಾಕಿದ್ದು ಹೇಳಿದ್ದು " ಅಂತ. ಅವರು ಹೇಳಬೇಕು ಅಂತಿದ್ದದ್ದು ಏನೆಂದರೆ " ಯೆಮ್ಮನೆ ಯೆಮ್ಮೇ ಕರ ಹಾಕಿದ್ದು ಹೇಳಿ ಆಚ್ಚೆಮನೆ ಬಾಗಮ್ಮ ಹೇಳಿದ್ದು " ಹೇಳಿ.

ವನಿತಾ / Vanitha said...

he he nice one:)

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಬರಹ ತುಂಬಾ ಚೆನ್ನಾಗಿದೆ .ಒಳ್ಳೆ ಖುಷಿ ಸಿಕ್ತು .

ಚುಕ್ಕಿಚಿತ್ತಾರ said...

ಹ್ಹ..ಹ್ಹ..ಹಾ..
ಆಡು ಭಾಷೆಯಲ್ಲಿ ಉ೦ಟಾಗುವ ಈ ರೀತಿ ಗೊ೦ದಲ ಕೇಳುಗರಿಗೆ ತಮಾಶೆಯಾಗಿರುತ್ತದೆ. ”ತುಪ್ಪ ತೆಗ್ದು ಆನೆ ಗೂಡಲ್ಲಿಟ್ಟಿದ್ನೆ..” ಅ೦ತ ಹವ್ಯಕ ಭಾಷೆಯಲ್ಲಿ ಅ೦ದರೆ ಕೇಳುಗರಿಗೆ ’ಆನೆಯನ್ನು ಗೂಡಲ್ಲಿ ಹೇಗಿಟ್ಟರೂ ’ ಅನ್ನುವ ತಲೆಬಿಸಿ ಶುರುವಾಗುತ್ತೆ..ಇದರ ಅರ್ಥ ’ನಾನೇ ತುಪ್ಪವನ್ನು ತೆಗೆದು ಗೂಡಲ್ಲಿ ಇಟ್ಟಿದ್ದೇನೆ’ ಅ೦ತ. ಹೀಗೆ ಆಡುಭಾಷೆಯ ಸೊಗಡು ಚ೦ದ.ಪದಗಳ ಅರ್ಥವೆ ಒ೦ದು..ಭಾವಾರ್ಥವೇ ಮತ್ತೊ೦ದು.

ಹಾಗಾಗಿ ಪ್ರಶ್ನೆ ಕೇಳಿ ಸರಿಯಾಗಿ ಅರ್ಥ ಮಾಡಿಕೊ೦ಡು ಉತ್ತರಿಸುವ ನಿಮ್ಮವರಜಾಣ್ಮೆಯೇ ಸರಿ....!

Manasa said...

Bhashe mattu baravanige tumbaa hidastu :) .. good one

sunaath said...

ಒಳ್ಳೇ ತಮಾಶೆ!

ಸವಿಗನಸು said...

ಚೆನ್ನಾಗಿತ್ತು ಪ್ರಸಂಗ....

ಮನಸು said...

very nice

ಮನಮುಕ್ತಾ said...

ಸುಬ್ರ್ಹಹ್ಮಣ್ಯ ಭಟ್ ಅವರೆ,
ಹವ್ಯಕ ಭಾಷೆ ಪ್ರಾ೦ತ್ಯದಿ೦ದ ಪ್ರಾ೦ತ್ಯಕ್ಕೆ ಬೇರೆ ಬೇರೆಯಾಗಿ ಇದೆ.ನನಗೆ ತಿಳಿದಿರುವ೦ತೆ ಸಿರ್ಸಿ,ಸಾಗರ,ಸಿದ್ದಾಪುರ ಹೊಸನಗರ,ತೀರ್ಥಹಳ್ಳಿ,ಉಡುಪಿ,ಎಲ್ಲಾ ಕಡೆಯೂ ಹವ್ಯಕ ಭಾಷೆ ಒ೦ದೇತೆರನಾಗಿಲ್ಲ.ಸ್ವರ ಶಬ್ದಗಳ ಉಪಯೊಗಗಳಲ್ಲಿ ವ್ಯತ್ಯಾಸವಿದೆ.ನಿಮಗೆ ಹವ್ಯಕ ಭಾಷೆ ಖುಶಿ ಕೊಟ್ಟಿದ್ದು ತಿಳಿದು ನನಗೂ ಸ೦ತೋಷವಾಯ್ತು.ಧನ್ಯವಾದಗಳು.

ಮನಮುಕ್ತಾ said...

ಓ ಮನಸೇ,
ಹಹಹಾ.. ನಕ್ಕು..ನಗಿಸುತ್ತಾ ನೀಡಿದ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.

ಮನಮುಕ್ತಾ said...

ವನಿತಾ,
ನಿಮ್ಮ ಅಕ್ಕರೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಡಾ.ಡಿ.ಟಿ.ಕೆ. ಅವರೆ,
ನಿಮ್ಮ ಮೆಚ್ಚುಗೆಗೆ ಹಾಗೂ ಸ೦ತಸದ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.

ಮನಮುಕ್ತಾ said...

ಮಾನಸಾ,
ನಿಮ್ಮ ಮೆಚ್ಚುಗೆ ತು೦ಬಿದ ಅಕ್ಕರೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ವಿಜಯಶ್ರೀ,
ಆನೆ ಗೂಡಲ್ಲಿ..!ಹಹಹಾ..ಚೆನ್ನಾಗಿದ್ದು.
ಹಿ೦ಗೇ ಮತ್ತೊ೦ದು..ಬೆಳಿಗ್ಗೆ ಆಸ್ರಿಗೆ (ಬೆಳಗಿನ ತಿ೦ಡಿ..ದೋಸೆ)ತಯಾರಿ ಮಾಡಕ್ಕಾರೆ,ಅಕ್ಕ ಹೇಳ್ತಡಾ..ಬೆಲ್ಲ ತೆಕ್ಕ೦ಡ್ ಬ೦ದು ..ಚೆಟ್ನಿಗೊ೦ದು ಹುಟ್ಟು (ಸೌಟು)ಹಾಕು ಹೇಳಿ..ತ೦ಗಿ ಕಕ್ಕಾಬಿಕ್ಕಿ ಆಗಿ ಚಟ್ನಿಗೆ ಒ೦ದು ಸೌಟು ಬೆಲ್ಲ ಬೇಕಾಗ್ತಾ ಹೇಳಿ ಅಕ್ಕನ್ನ ನೋಡಲ್ ಹಣಕ್ತಡ..ಖರೆ ಅ೦ದ್ರೆ..ಬೆಲ್ಲ ತೆಕ್ಕ೦ಡ್ ಬ೦ದಿಡು.. ಚೆಟ್ನಿಇರುವ ಪಾತ್ರಕ್ಕೆ ಬಡಿಸಲೆ ಒ೦ದು ಹುಟ್ಟು ಹಾಕು ಹೇಳಿ ಅದರರ್ಥ.ಇದೂ ನಮ್ಮನೇರ ನೆನ್ಪಿನ್ ಸ೦ಚಿದೇಯ..
ಹ್ನಾ ನನ್ನವರ ಜಾಣ್ಮೆ ನನಗು ಹೌದು ಅನ್ನಿಸಿದರೂ ಹಾಗೆ ಸೀದಾ ಹೇಳಿ ಬಿಟ್ಟರೆ ಆಗಾಗ ನೆನಪಿನ ಸ೦ಚಿ ತೆರೆಯುವುದಿಲ್ಲ.ಅವರ ಜಾಣ್ಮೆಗೆ ಬೆಲೆ ಕೊಡಬೇಕೆ೦ದೇ ಅವರ ಮೆಚ್ಚಿನ ಮಗೆಕಾಯಿ ವಡಪೆ ಮಾಡಲು ಹೊರಟಿದ್ದು! :))
ಅಕ್ಕರೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಸುನಾಥ್ ಕಾಕಾ,
ನಿಮ್ಮ ಹರುಷ ತು೦ಬಿದ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಸವಿಗನಸು,
ನಿಮ್ಮ ಮೆಚ್ಚುಗೆ ತು೦ಬಿದ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ಮನಸು,
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು:)

ಸೀತಾರಾಮ. ಕೆ. said...

ನನ್ನ ಇಬ್ಬರು ಅತ್ತಿಗೆಯವರೂ ಹವ್ಯಕ ಹೆಗಡೆ ಕುಟು೦ಬದವರೂ ಅವರಿಬ್ಬರು ಸೇರಿದಾಗ ನಡೆವ ಹೋಜಡ-ಬ೦ಜೆಡ ಭಾಷೆಯ ಸೊಗಸನ್ನು ಸವಿದು ಅವರನ್ನು ರೇಗಿಸುತ್ತಾ ಇರುತ್ತೆವೆ. ನಮ್ಮಣ್ಣನ್ನ೦ತು ಅವುಗಳನ್ನು ತು೦ಬಾ ಚೆನ್ನಾಗಿ ಅಣುಕು ಮಾಡಿ ರಸವತ್ತಾದ ಪ್ರಸ೦ಗಗಳನ್ನು -ಪಜೀತಿಗಳನ್ನು ಹೇಳುತ್ತಾ ಇರುತ್ತಾನೆ. ನಮಗೆಲ್ಲಾ ಮೋಜು. ಅತ್ತಿಗೆಯ೦ದಿರೂ ಏನು ಕಮ್ಮಿ ಇಲ್ಲ ನಮ್ಮ ತುಳುಭಾಷೆಗೆ ಅಣುಕು ಮಾಡಿ ಕಿಚಾಯಿಸಿ ಮುಯ್ಯಿ ತೀರಿಸಿಕೊಳ್ಳುತ್ತಾರೆ.
ತ್ತಮ್ಮ ಲೇಖನ ಓದಿ ಎಲ್ಲಾ ನೆನಪಿಗೆ ಬ೦ದವು.
ಇನ್ನೊ೦ದು ಭಾಷೆ ಇದೆ ನಮ್ಮ ಕೋಟೆಶ್ವರ ಮತ್ತು ಕು೦ದಾರಪುರದಲ್ಲಿ ಅದು ಕನ್ನಡ ಭಾಷೆ ಅ೦ತಾ ಹೇಳಿದರೂ ಯಾರೂ ನ೦ಬುವದಿಲ್ಲ!!
ಕೆಲವು ಸ್ಯಾ೦ಪಲ್ಸ್
" ಆ ಹೈಕುಳು ಮಾಡ್ತಾ ಕಾ೦ಬಾ" (ಆ ಮಕ್ಕಳು ಮಾಡೊದನ್ನ ನೋಡೋಕೆ ಆಗಲ್ಲಾ)
"ಅವರು ಹೊಪುದಿಲ್ಲೆ" (ಅವರು ಹೋಗುವದಿಲ್ಲ)
"ಅವ್ರು ಹೊಯ್ಕ೦ಬ್ರು/ ಬರ್ಕ೦ಬ್ರು"(ಅವರು ಹೋಗಬೇಕ೦ದರು/ಬರಬೇಕ೦ದರು)
"ಹ್ವೊಪಕಿಲ್ಲೆ -ಬರ್ಕಿಲ್ಲೆ" (ಹೋಗಲಿಕ್ಕಿಲ್ಲ/ಬರಲಿಕ್ಕಿಲ್ಲ)

sapna said...

ನಿಮ್ಮ ಕಡೆ ಭಾಷೆ ಕೇಳೋಕೆ ಚೆಂದ. ನಮ್ಮ ಕನ್ನಡಕ್ಕೂ ನಿಮ್ಮದಕ್ಕೂ ಸಖತ್ ಡಿಫ್ರೆನ್ಸ್ ಅಲ್ವಾ? ನಮ್ ಆಫೀಸಿನಲ್ಲೂ ಸುಮಾರು ಮಂದಿ ಹವ್ಯಕ ಹುಡ್ಗೀರಿದ್ದಾರೆ. ಅವ್ರು ಅಪ್ಪಿ ತಪ್ಪಿ ಆ ಕಡೆ ಭಾಷೇಲಿ ಏನಾದ್ರೂ ಹೇಳಿದ್ದು ಅರ್ಥವಾಗ್ದಿದ್ರೆ ಅವತ್ತು ಅವ್ರ ಕಥೆ ಮುಗೀತು ಅಂತಾನೇ ಲೆಕ್ಕ. ರೇಗಿಸಿ ರೇಗಿಸಿ ಗೋಳುಹೊಯ್ಕೋಳೋದೇ ಕೆಲ್ಸ!

ಸಾಗರದಾಚೆಯ ಇಂಚರ said...

ಮನಮುಕ್ತಾ
ಹವ್ಯಕ ಭಾಷೆ ಕೇಳಿ ರಾಶಿ ಖುಷಿ ಅತು
ಕೆಲವು ವಿಷಯನ್ ಅದೇ ಭಾಷೇಲಿ ಬರದ್ರೆನೆ ಚಂದ್
ರಾಶಿ ಚಂದ್ ಬರದ್ರಿ

!! ಜ್ಞಾನಾರ್ಪಣಾಮಸ್ತು !! said...

-->ಮನಮುಕ್ತಾ,

ಬಲು ಚಲೋ ಆತು ಬುಡ್ರುಲ ಮತ್ತ..

Snow White said...

tumba chennagide :) :)

Bhat Chandru said...

ವೆಂಕಟ ತಂದ ಸಂಕಟ ಹಾ ಹಾ. ಚೆನ್ನಾಗಿದೆ.
ಅಕ್ಕ ನಮಗೆ ಯಾವಾಗ ಕೊಡ್ತೀರಾ ಮೊಗೇಕಾಯಿ ವಡಪೆ?

"NRK" said...

ಭಾಷೆ ಅಂದ್ರನ ಹಂಗ ಧಾರವಾಡ ಪೇಡೆ ಹಂಗ,
ಅರ್ಥ ಹೋಗಿ ಅನರ್ಥ ಆತಂದ್ರ ಬಳ್ಳಾರಿ ಬಿಸಿಲಿನಂಗ.
ಬಾಳ್ ಚಲೋ ಆತ್ ನೋಡ್ರಿ ಬರ್ದದ್ದ್.

ಅರುಂಧತಿ said...

ಅಗ್ದಿ ಖರೆ ಏಳಿಲ್ದ್ರಿ ನೋಡ್ರಿ ಒಂದೊಂದ ಸತೆ ಈ ಭಾಷಾ ಪ್ರಭಾವ ಹೇಂಗ ಇರತದ ಅಂದ್ರ ಅಬ್ಬಬ್ಬಾ ಅವ ತಂದ ಇಡೋ ಕುತ್ತುಗೋಳ ಭಾರಿ ಇರತಾವ . .ಇಂಥಾ ಸೂಕ್ಷ್ಮತೆ ನೋಡಿ ಬರದ ಈ ಲೇಖನಾ ಭಾರಿ ಛಂದ ಅದರಿ . .ಹಿಂಗ ಬರೀತಿರಿ . . !!

ಸಿಮೆಂಟು ಮರಳಿನ ಮಧ್ಯೆ said...

ಮನಮುಕ್ತಾ....

ತುಂಬಾ ತಮಾಶೆಯಾಗಿದೆ...

ಬಹಳ ಆಪ್ತವಾಗಿದೆ..
ಒಮ್ಮೆ ಊರಕಡೆಯ ಹಿರಿಯರು...
ನನ್ನಜ್ಜ...
ಆಗಿನ ಕಾಲ..
ಎಲ್ಲವೂ ನೆನಪಾಯಿತು...

ತುಂಬಾ ಸೊಗಸಾಗಿ ಚಿತ್ರಿಸಿದ್ದೀರಿ...

ಅಭಿನಂದನೆಗಳು...

Deepasmitha said...

ಭಾಷಾ ಗೊಂದಲ ತಮಾಷೆಯಾಗಿತ್ತು. ಹಿಂದೆ telegram ಬಂದರೆ ಸಾಕು ಬಹಳ ಹೆದರುತ್ತಿದ್ದರು. Telegram ತರುವುದು ಸಾವಿನ ಸುದ್ದಿಯೇ ಎಂದು ತಿಳಿದು ಅಂಚೆಯವನು telegram ಅಂದ ಕೂಡಲೆ ಜನರು ಅಳುವುದಕ್ಕೆ ಶುರು ಮಾಡುತ್ತಿದ್ದರಂತೆ. ಅದೆ ರೀತಿಯಾಯ್ತು ನಿಮ್ಮ ಬರಹದಲ್ಲಿ ಕೂಡ.

ನೀವು ಬರೆದಂತೆ ಹವ್ಯಕ ಭಾಷೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾಗುತ್ತದೆ. ಮಲೆನಾಡು ಕರಾವಳಿಯ ಹವ್ಯಕಕ್ಕೂ ಪುತ್ತೂರು ಸುಳ್ಯ ಕಡೆ ಹವ್ಯಕಕ್ಕೂ ಅಜಗಜಾಂತರ ವ್ಯತ್ಯಾಸ. ಅವರ ಪದಗಳು ನಮ್ಮ, ಅಂದರೆ ಮಲೆನಾಡು ಹವ್ಯಕರಿಗೆ ಕೂಡ ಅರ್ಥವಾಗುವುದಿಲ್ಲ.

ಇನ್ನು ಹೆಣ್ಣುಮಕ್ಕಳಿಗೆ ಬಳಸುವ 'ಅದು, ಇದು, ಬಂತು, ಹೋತು' ಎಂಬ ನಪುಂಸಕ ಲಿಂಗ ಪದಪ್ರಯೋಗ ಇತರರಿಗೆ ಮೋಜೆನಿಸುತ್ತದೆ

ಸುಧೇಶ್ ಶೆಟ್ಟಿ said...

kannada bhaasheya sogadina bagge yesthu baredharu theeradhu...
havyaka bhaasheya baLake E lEkanadalli thumba chennagi moodi bandhidhe :)

ಜಲನಯನ said...

Nice.... Heegoo Agutte...!!!
haudu aadu bhaashe ..odu baashe eradara vyatyaasa gondalle daari...hahaha

ಜಲನಯನ said...

ಮನಮುಕ್ತಾ...ಚನ್ನಾಗಿದೆ. ಓಮ್ದೆಡೆಯ ಭಾಷೆ ಇನ್ನೊಂದೆಡೆ ಅಭಾಸೆ.....ಹಹಹ

ವಿ.ಆರ್.ಭಟ್ said...

ಸಕತ್ತಾಗಿತ್ ಕಾಣಿ ನಿಮ್ಮ ಭಾಷಿ ಮಾರ್ರೆ , ನಾವೆಲ್ಲಾ ಒಂದಪ ಊರ್ಕಡಿಗ್ ಹೊದಾಂಗಿತ್ತ್, ಭಾಷೆ ಪ್ರಾದೇಶಿಕ, ಅದರ ಬಳಕೆ ಕೆಲವೊಮ್ಮೆ ಸ್ಥಾನಿಕ. ಹವ್ಯಕ ಭಾಷೆಯನ್ನು ಅರ್ಥವಾಗದಿದ್ದರೂ ಬಹಳ ಜನ ಮೆಚ್ಚುತ್ತಾರೆ, ಅದರಲ್ಲಿ ಅಂಥಾ ಮಜವನ್ನೇನು ಕಂಡರೋ ಗೊತ್ತಿಲ್ಲ. ಇದೇ ಭಾಷೆ ದೊಂಬಿಗೆ ಕಾರಣವಾದ ಘಟನೆ ಕೇಳಿ- ನಾನು ಬೆಂಗಳೂರಿಗೆ ಬಂದು ನೆಲಸಿದ ಮೊದಲಲ್ಲಿ ನಮ್ಮದೊಂದು ಸಣ್ಣ ಕೊಠಡಿ.ಅಲ್ಲಿ ನಾವು ಇಬ್ಬರಿದ್ದೆವು-ಬಾಡಿಗೆ ನಿಭಾಯಿಸಬೇಕಲ್ಲ ! ಒಬ್ಬಾತ ನನ್ನ ಸ್ನೇಹಿತನ ಸ್ನೇಹಿತ ಬಿ.ಎಡ್ ಮಾಡಲು ಬಂದ, ಆತನಿಗೆ ನನ್ನ ಸ್ನೇಹಿತನ ವಿನಂತಿಯ ಮೇರೆಗೆ ಅವಕಾಶ ಕಲ್ಪಿಸಲಾಯಿತು. ಒಂದಿನ ಸಂಜೆ ನಾನು ಹೊರಗಡೆಯಿಂದ ಬರುವ ಹೊತ್ತಿಗೆ ನನ್ನ ಮೊದಲನೆಯ ರೂಮ್ ಮೇಟ್ ಮತ್ತು ಈತ ಈ ಇಬರ ನಡುವೆ ಮಾರಾಮಾರಿ ಆಗುವುದೊಂದು ಬಾಕಿ ! ಕೈಕೈ ಮಿಲಾಯಿಸಿತ್ತು. ಕಾರಣ ಇಷ್ಟೇ - ನಮ್ಮೂರಲ್ಲಿ ಪುಡಿಗೆ 'ಹೊಡಿ' ಎಂಬ ಪದ ಗ್ರಾಮ್ಯ ಪಡ ಬಳಕೆಯಲ್ಲಿದೆ. ನಮ್ಮ ಬಿ.ಎಡ್ ಮನುಷ್ಯ ನನ್ನ ಮೊದಲನೇ ರೂಮ್ ಮೇಟ್ ಹತ್ತಿರ ಹೊಡಿ ಹೊಡಿ ಅಂತ ಸಾಂಬಾರು ಪುಡಿಯ ಬಗ್ಗೆ ಕೇಳಿದ್ದಾನೆ. ಮೊದಲ ರೂಮ್ ಮೇಟ್ ಪಾವಗಡದವ, ಪಾಪ ಅವನಿಗೆ ಮೊದಲು ಅರ್ಥವಾಗಲಿಲ್ಲ, ತಲೆಕೆರೆದುಕೊಂಡಿದ್ದ , ಆಮೇಲೆ ಅಲ್ಲಿಗೆ ಪಕ್ಕದ ಯಾರೋ ಬಂದರು-ಅವರು ಅವನಿಗೆ "ಏಯ್ ಹೊಡಿ ಅಂತಾನಲೋ ಅವನಿಗೇನ್ ಕೊಬ್ಬು ನೋಡು " ಅಂತೇನೋ ಹೇಳಿದ್ದಾರೆ, ಇಲ್ಲೇ ವ್ಯವಹಾರ ವ್ಯತ್ಯಾಸವಾಗಿಬಿಟ್ಟಿದೆ! ಬಿ.ಎಡ್ ಮಾಡುವವ ನಾನು ಬರದಿದ್ದರೆ ವಿನಾಕಾರಣ ಗೂಸಾ ತಿನ್ನುತ್ತಿದ್ದ! ನಿಮ್ಮ ಘಟನೆ ಚೆನ್ನಾಗಿದೆ. ಸೀತಾರಾಮ್, ಸಾಹೇಬರ ಹೋಜಡ-ಬಂಜಡವೂ ಚೆನ್ನಾಗಿದೆ, ಮತ್ತಷ್ಟು ಹರಿದು ಬರಲಿ, ನಮಸ್ಕಾರ

ಮನಮುಕ್ತಾ said...

ಪ್ರತಿಯೊ೦ದು ಭಾಷೆಗಳೂ ಅದರದೇ ಆದ೦ತಹ ಸೊಬಗು, ನವಿರು, ಸೊಗಸುಗಳಿ೦ದ ತು೦ಬಿರುತ್ತವೆ.ಭಾಷೆಯಲ್ಲಿನ ಶಬ್ದಗಳು ಬೇರೆಬೇರೆ ಸ೦ದರ್ಭದಲ್ಲಿ, ಬೇರೆ ಬೇರೆ ಸ್ಥಳದಲ್ಲಿ ಬೇರೆ ಬೇರೆ ಅರ್ಥ ಕೊಡುವುದರಿ೦ದ ಕೆಲವೊಮ್ಮೆ ಅರ್ಥ ಮಾಡಿಕೊಳ್ಳುವುದರಲ್ಲಿ ತಪ್ಪಾಗಿಬಿಡುತ್ತದೆ.ಎಲ್ಲಾ ಭಾಷೆಗಳನ್ನೂ ಪ್ರೀತಿಸಿದಾಗ ಗೌರವಿಸಿದಾಗ ಆ ಆ ಭಾಷೆಯ ಸಿಹಿ,ಹಾಸ್ಯ,ಸೊಬಗು ತಿಳಿದು, ಮನಸ್ಸಿಗೆ ಮುದ ಕೊಡುತ್ತದೆ.ಹವ್ಯಕ ಭಾಷೆ ಕೂಡಾ ಸೊಗಸು ನವಿರು, ಸೊಬಗಿನಿ೦ದ ಕೂಡಿದೆ..
ನನ್ನ ಬರಹಕ್ಕೆ ಆದರದಿ೦ದ ಪ್ರತಿಕ್ರಿಯಿಸಿದ,
ಸೀತಾರಾಮ್,
ಸಪ್ನಾ,
ಸಾಗರಾಚೆಯ ಇ೦ಚರ,
ಜ್ನಾನಾರ್ಪಣಮಸ್ತು,
ಸ್ನೋವೈಟ್,
ಭಟ್ ಚ೦ದ್ರು,
ಎನ್ ಅರ್ ಕೆ,
ಅರು೦ದತಿ,
ಪ್ರಕಾಶಣ್ಣ,
ದೀಪಸ್ಮಿತ,
ಸುದೇಶ್ ಶೆಟ್ಟಿ,
ಜಲನಯನ,
ವಿ. ಆರ್. ಭಟ್ ,
ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ನತೆಗಳು.
@ ವಿ. ಆರ್. ಭಟ್, ಹವ್ಯಕ ಭಾಷೆಯಲ್ಲಿ ಪುಡಿಗೆ,ಪುಡಿ ಅಥವಾ ಹುಡಿ ಎನ್ನುತ್ತಾರೆ ಅಲ್ಲವೇ?

ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಮತ್ತೊಮ್ಮೆ ಕೃತಜ್ನತೆಗಳು.

Satish MR said...

ನಿಮ್ಮ ಬರವಣಿಗೆಯ ಶೈಲಿ ಇಷ್ಟವಾಯಿತು. ಸುಂದರ ಬರಹ.

ಮನಮುಕ್ತಾ said...

ಸತೀಶ್ ಅವರೆ ,
ನನ್ನ ಬ್ಲಾಗಿಗೆ ಸ್ವಾಗತ.
ಚೆ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.
ಬರುತ್ತಿರಿ.