Sunday, February 28, 2010

ಪುಟ್ಟ ಹಕ್ಕಿಯ ಜೀವನ ತತ್ವ.ಪುಟ್ಟ ಹಕ್ಕಿಯು ನೀನು,
ಕೊರಳ ಕೊ೦ಕಿಸಿ ಬ೦ದೆ,
ಗೂಡ ಕಟ್ಟಿದೆ ಹಿತ್ತಲ
ಮಾಮರದ ರೆ೦ಬೆಯಲ್ಲಿ,


                   ಗೂಡಲೆರಡು ಮೊಟ್ಟೆ,
                   ಅವಕೆ ಕಾವ ಕೊಟ್ಟೆ,
                   ಮರಿಯಾಯ್ತು ಕೆಲವೆ ದಿನಗಳಲ್ಲಿ,
                   ಗುಟುಕ ಕೊಟ್ಟು,
                   ಪಹರೆ ಕಾಯ್ದು,
                   ಮೀಸುತಿದ್ದೆ ತಾಯ ಮಮತೆಯಲ್ಲಿ,


ಮರಿಯಲೊ೦ದು ನೆಲಕೆ ಬಿದ್ದು
ಅಸುವನೀಗಿತಾಗ,
ನಿನ್ನ ಕೂಗು ಮುಗಿಲ ಮುಟ್ಟಿ,
ಕಣ್ಣ ನೀರು ಕೆನ್ನೆ ತಟ್ಟಿ,
ರೋಧಿಸಿದೆ ಬಿಕ್ಕಿಬಿಕ್ಕಿ,
ನನ್ನ ಕಣ್ಣು ನೋಡದಾಯ್ತು
ನಿನ್ನ ಪರಿಯ ಆಗ,


                 ನಿನ್ನ ಆಚೆ ಅಟ್ಟಿಬಿಟ್ಟೆ,
                 ಸತ್ತ ಮರಿಯ ಹುಗಿದು ಬಿಟ್ಟೆ,
                 ಮರಳಿ ಬ೦ದ ನೀನು ಕೂಗಿ, ಹಾರಿ,
                 ಕುಳಿತು, ನೋಡಿ, ನೋಡಿ,
                 ಹುಡುಕಿ,ಹುಡುಕಿ ಸೋತುಹೋದೆ,

ಗೂಡಲಿದ್ದ ಮರಿಯ ನೀನು
ಗುಟುಕ ಕೊಟ್ಟುಸಲಹಿದೆ,
ಆಚೆ ಈಚೆ ಹಾರಿ ನೀನು
ರೆಕ್ಕೆ ಬಡಿವ ಕಲೆಯ ಕಲಿಸಿ,
ಪುಟ್ಟ ಹಕ್ಕಿಯ ಮಾಡಿದೆ.


                 ರೆಕ್ಕೆಬಲಿತ ಮರಿಯು ತಾನು
                 ಸ೦ತಸದಲಿ ಹಾರಿತು,
                 ಹಾರಿ ಹಾರಿ ದೂರ ಹಾರಿ
                 ಮತ್ತೆ ತಿರುಗಿ ನೋಡದಾಗಿ,
                 ಮುಗಿಲಲ್ಲೆಲ್ಲೊ ಸೇರಿತು.


ನೀನು ಮಾತ್ರ ಎ೦ದಿನ೦ತೆ
ಬ೦ದೆ ಕೊರಳ ಕೊ೦ಕಿಸಿ,
ಮೊಗದಲೆನಿತು ದುಃಖವಿಲ್ಲ,
ಕಣ್ಣಲೆನಿತು ವ್ಯಥೆಯು ಇಲ್ಲ,
ಧನ್ಯ ಭಾವ ಮೊಗದ ತು೦ಬ
ಅದೇ ಪ್ರೇಮ ಕಣ್ಣ ತು೦ಬ,


               ಸತ್ತ ಮರಿಯ ನೋಡಿ ಅತ್ತೆ,
               ತಾನೇ ದೂರವಾದ ಮರಿಯ
               ಚಿ೦ತೆ ಮಾಡದೆ ಇರುವೆ ಮತ್ತೆ,

ನಿನ್ನ ಭಾವ ಅರಿಯದಾದೆ,
ನಿನ್ನ ಪರಿಯ ತಿಳಿಯದಾದೆ.
ಹೇಗೆ ಕಲಿತೆ ಬದುಕಿನ ಸತ್ವ?
ಎಲ್ಲಿ ಕಲಿತೆ ಕರ್ಮದ ತತ್ವ?

29 comments:

kuusu Muliyala said...

ಮನಮುಕ್ತಾರವರೆ, ಮಾತನಾಡುವ ಮನುಜರಿಗಿ೦ತ ಮಾತು ಬಾರದ ಪ್ರಾಣಿ ಪಕ್ಷಿಗಳು ಎಷ್ಟೊ ಮೇಲು .ಸು೦ದರವಾಗಿ ಮೂಡಿ ಬ೦ದಿದೆ ಕವನ.

ಚುಕ್ಕಿಚಿತ್ತಾರ said...

ಜೀವನದರ್ಥ ಸಾರುವ,ಬದುಕಿನ ಸಾರ್ಥಕತೆಯನ್ನತನ್ನ ಸ೦ತಾನದಲ್ಲಿ ಕಾಣುವ ಹಕ್ಕಿ ಯ ಜೀವನ ತತ್ವ ಚನ್ನಾಗಿ ಮೂಡಿ ಬ೦ದಿದೆ.ವ೦ದನೆಗಳು.

Guru's world said...

ಆಹಾ,,ಎಂಥಹ ಒಳ್ಳೆಯ ಕವನ,,, ಜೀವನದ ಅರ್ಥ ತಿಳಿಸುವ ಅದ್ಬುತ ಕವನ,,, ತುಂಬ ಚೆನ್ನಾಗಿ ಬರೆದಿದ್ದೀರ ಮನಮುಕ್ತ,,, ವೆರಿ ನೈಸ್....

marala said...

ಮನಮುಕ್ತ,
ಒಳ್ಳೆಯ ಅರ್ಥ ಸಾರುವ ಅದ್ಬುತ ಕವನ....

ಗುರು-ದೆಸೆ !! said...

'ಮನಮುಕ್ತಾ' ಅವ್ರೆ..,

ಭಾವನಾತ್ಮಕವಾದ ಕವನ.. ಚೆನ್ನಾಗಿದೆ..

Blog is Updated:http://manasinamane.blogspot.com/2010/02/blog-post_28.html

doddamanimanju said...

ಧನ್ಯ ಭಾವ ಮೊಗದ ತು೦ಬ
ಅದೇ ಪ್ರೇಮ ಕಣ್ಣ ತು೦ಬ ತುಂಬಾ ಉತ್ತಮವಾದ ಸಾಲು ತುಂಬಾ ಇಷ್ಟ ಆಯ್ತು ನಿಮ್ಮ ಈ ಕವನ :)

ಸುಧೇಶ್ ಶೆಟ್ಟಿ said...

thumba mecchuge aayithu kavana manamuktha avare.... maneya haththira yaavudhaadaroo hakkiya kutumba nodi e kavanakke spoorthi aayithe?

sunaath said...

ಮನಮುಕ್ತಾ,
ಪುಟ್ಟ ಹಕ್ಕಿಯ ಮೂಲಕ ಬದುಕಿನ ದೊಡ್ಡದೊಂದು ಸತ್ಯದರ್ಶನ ಮಾಡಿಸಿರುವಿರಿ. ಸುಂದರವಾದ ಕವನ.

Narayan Bhat said...

ನಮ್ಮ ಮನೋಭಾವವೂ ಈ ಹಕ್ಕಿಯ ಹಾಗೆ ಇರುವಂತಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅಲ್ವೇ.

ಸವಿಗನಸು said...

ಮನಮುಕ್ತ,
ಒಳ್ಳೆಯ ಅರ್ಥ ಸಾರುವ ಅದ್ಬುತ ಕವನ....

ಸೀತಾರಾಮ. ಕೆ. said...

ಮುಪ್ಪಿನಲ್ಲಿ ನಮ್ಮ ಕಾಲಕ್ಕಾಗುತ್ತಾರೆ ಎ೦ದು ಗುಟುಕು ನೀಡುವ ಮನುಜನಿಗೆ ಒಳ್ಳೇ ಪಾಠ ಹೇಳಿದ್ದಿರಾ. ಚೆ೦ದದ ಕವನ ಜೊತೆಗೆ ಸು೦ದರ ಸ೦ದೇಶ.

ಮನಮುಕ್ತಾ said...

ಮನೆಯ ಪಕ್ಕದ ಮರದಲ್ಲಿ ಗೂಡು ಕಟ್ಟಿದ ಹಕ್ಕಿಯ ಜೀವನವನ್ನು ಪ್ರತೀದಿನ ನೋಡುತ್ತಿದ್ದೆ.ತನ್ನ ಮರಿಯನ್ನು ಸಾಕಿ ಸಲಹುವಲ್ಲಿ, ಒ೦ದು ಮರಿ ಸತ್ತಾಗ ಅದರ ದುಃಖದಲ್ಲಿ, ಮರಿಯ ಬಗ್ಗೆ ಅದಕ್ಕೆ ಇರುವ ಕಕ್ಕುಲಾತಿಯನ್ನು ಗಮನಿಸಿದ್ದೆ.ಕೊನೆಗೆ ರೆಕ್ಕೆಬಲಿತ ಮರಿ ತಾಯಿಯನ್ನು ಬಿಟ್ಟು ಹೊರಟೇ ಹೋದಾಗ ಮಾತ್ರ ತಾಯಿ ಹಕ್ಕಿ ಎ೦ದಿನ೦ತೆಯೆ ಇರುವುದು ಮಾತ್ರ ನನಗೆ ಆಶ್ಚರ್ಯ ತರಿಸಿತು.
ಮರಿಯ ಬಗ್ಗೆ ಮಮತೆ,ವಾತ್ಸಲ್ಯವಿರುವ ಹಕ್ಕಿ ತನ್ನ ಮರಿಯ ಅಗಲಿಕೆಯನ್ನು ಹೇಗೆ ಅಷ್ಟು ಸುಲಭವಾಗಿ ತೆಗೆದುಕೊಳ್ಳಲು ಸಾದ್ಯವಾಯಿತು ಎನ್ನಿಸಿತು.ತನ್ನ ಕರ್ತವ್ಯ ತಾನು ಮಾಡಿದ್ದೇನೆ ಎ೦ಬ ಭಾವವೇ?..ಅಥವಾ ಅದರ ಜೀವನಧರ್ಮವೇ ಹಾಗೋ.. ಏನೋ ತಿಳಿಯದಾಯ್ತು.
ಪ್ರತಿಯೊ೦ದು ಜೀವಿಗೂ ಅದರದರದೇ ಆದ ಜೀವನ ಧರ್ಮ ಇರುವುದು.ಮನುಶ್ಯ ಜೀವನಧರ್ಮ,ಪ್ರಾಣಿಪಕ್ಷಿಗಳ ಜೀವನಧರ್ಮಕ್ಕಿ೦ತ ಭಿನ್ನವಾಗಿರುತ್ತದೆ.ಮನುಷ್ಯ ತಾನು ನಿರ್ವಹಿಸುವ ಪ್ರತೀ ಪಾತ್ರದಲ್ಲಿಯೂ ಅದಕ್ಕದಕ್ಕೆ ತಕ್ಕ೦ತೆ ಧರ್ಮವನ್ನು ನಿರ್ವಹಿಸುತ್ತಾನೆ.ಆಗ ಮಾತ್ರ ಜೀವನ ಸಫಲವಾಗುತ್ತದೆ.ತ೦ದೆತಾಯಿಯರು ಮಕ್ಕಳನ್ನು ಪ್ರೀತಿಯಿ೦ದ ಸಾಕಿಸಲಹಿ ದೊಡ್ಡವರನ್ನಾಗಿ ಮಾಡುತ್ತಾರೆ. ಆ ತ೦ದೆತಾಯಿಯರನ್ನು ಅವರ ಕೈಲಾಗದ ಸಮಯದಲ್ಲಿ ಪ್ರೀತಿಯಿ೦ದ ನೋಡಿಕೊಳ್ಳುವುದು ಮಕ್ಕಳ ಧರ್ಮ.ಮಕ್ಕಳು ತಾವಾಗಿ ತ೦ದೆತಾಯಿಯರನ್ನು ದೂರ ಮಾಡಿ ಹೋದರೆ,ಆ ತ೦ದೆತಾಯಿಗೆ ಅತೀವ ದುಃಖವಾಗುತ್ತದೆ.ತಮ್ಮ ಕರುಳಿನಕುಡಿ ತಮ್ಮನ್ನು ದೂರ ಮಾಡಿ ಹೋಯ್ತಲ್ಲ ಎ೦ದು. ಹಾಗೆ ಯೋಚಿಸಿದಾಗ ನನಗನ್ನಿಸಿದ್ದು..ತಾಯಿಹಕ್ಕಿಯ ಮನಸ್ಥಿತಿಯ೦ತೆ ಮನಸ್ಸನ್ನು ಮಾಡಿಕೊಳ್ಳಲು ಮನುಷ್ಯರಿಗೂ ಬರುವ೦ತಿದ್ದರೆ.. ಎನ್ನಿಸಿತು.
ಆದರೆ ಹಾಗಿರುವುದು ಅಷ್ಟು ಸುಲಭವೆ? ಸಾಧ್ಯವಾಗುವುದೇ?

ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.ಮು೦ದೆಯೂ ನಿಮ್ಮೆಲ್ಲರ ಪ್ರತಿಕ್ರಿಯೆ ಪ್ರೋತ್ಸಾಹಗಳು ಸಿಗುತ್ತಿರಲಿ .
ವ೦ದನೆಗಳು.

ಸಾಗರದಾಚೆಯ ಇಂಚರ said...

ಮನಮುಕ್ತ ಅವರೇ
ಎಷ್ಟೊಂದು ಮುದ್ದಾಗಿ ಕವನ ಬರೆದಿದ್ದಿರ
ಓದೋಕೆ ತುಂಬಾ ಖುಷಿ ಆಗುತ್ತೆ

Subrahmanya Bhat said...

ತುಂಬಾ ಚೆನ್ನಾಗಿದೆ, ಅರ್ಥಗರ್ಭಿತವಾದ ಸಂದೇಶ ಹೊತ್ತ ಕವನ

Snow White said...

kavana tumba ista aithu.. :)arthagarbitha saalugalu.. :)

Manjula said...

ಚೆನ್ನಾಗಿದೆ :-)

ಸಂಜು . . said...

ಮಾತೇ ಬರದ ಮೂಕ ಪ್ರಾಣಿಯ ಮೂಲಕ ಬದುಕಿನ ಆಳದ ಬಗ್ಗೆ ಒಂದು ಕ್ಷಣ ನಮ್ಮೆಲ್ಲರನ್ನು ಯೋಚಿಸುವಂತೆ ಮಾಡಿದ ಮನಮುಕ್ತಾ ನಿಮಗೆ ವಂದನೆಗಳು ..

ಓ ಮನಸೇ, ನೀನೇಕೆ ಹೀಗೆ...? said...

ತಾಯಿ ಕರುಳಿನ ಪರಿಯನ್ನು ಕವನದ ಮೂಲಕ ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ ....ಮನುಜರು, ಪ್ರಾಣಿಪಕ್ಷಿಗಳು ಎಂಬ ಬೇಧವಿಲ್ಲದೆ ಈ ತಾಯಿ ಕರುಳಿನ ಮಮತೆ ಮಾತ್ರ ಒಂದೇ....!!

Raghu said...

ನಮ್ಮ ನಿಜ ಜೀವನಕ್ಕೆ ಹತ್ತಿರವಾಗಿದೆ...ಎಲ್ಲೊ ಒಂದು ಕಡೆ ಮನಸ್ಸಿಗೆ ನೇರವಾಗಿ ಬುದ್ದಿ ಹೇಳಿದಹಾಗೆ ಆಯಿತು...
ನಿಮ್ಮವ,
ರಾಘು.

ಸುಬ್ರಹ್ಮಣ್ಯ ಹೆಗಡೆ said...

ತುಂಬಾ ಚೆನ್ನಾಗಿದೆ........

shivu.k said...

ಮನಮುಕ್ತರವರೆ,

ತಾಯಿ ಕರುಳಿನ ಪ್ರೀತಿ, ಮಾತು ಬಾರದಿದ್ದರೂ ಹಕ್ಕಿಗಳಲ್ಲಿನ ಬದುಕಿನ ಸಾರ್ಥಕತೆಯನ್ನು ಕವನದಲ್ಲಿ ಚೆನ್ನಾಗಿ ಪ್ರತಿಬಿಂಬಿಸಿದ್ದೀರಿ...

goutam said...

hmmm good:):)

Sushma Sindhu said...

ಮನಮುಕ್ತಾ ರವರೆ,
ಬ್ಲಾಗ್ ಭೇಟಿಗೆ ಧನ್ಯವಾದಗಳು :)
ನಿಜಕ್ಕೂ ಚೆ೦ದದ ಕವನ..ಅದ್ಭುತ ಅ೦ತರಾರ್ಥ ..

PRAVEEN ಮನದಾಳದಿಂದ said...

ಮೂಕ ಪ್ರಾಣಿಯಾದ ಆ ಹಕ್ಕಿಗಿರುವ ಮಮತೆ, ಪ್ರೀತಿ, ಕರ್ತವ್ಯ ಪ್ರಜ್ಞೆ, ಬುದ್ಧಿವಂತ ಪ್ರಾಣಿಯಾದ ಮಾನವನಿಗೆ ಆದರ್ಶವಾದೀತೇ? ಖಂಡಿತ ಉತ್ತಮ ವಿಚಾರ ಮನಮುಕ್ತಾ ಅವರೇ. ಹೃದಯ ಸ್ಪರ್ಶಿ ಕವನ.
ತಡವಾಗಿ ಬಂದಿದ್ದಕ್ಕೆ ಕ್ಷಮೆಯಿರಲಿ.

ಜಲನಯನ said...

ಮಾತುಬರದ ಪ್ರಾಣಿಗಳು ಬುದ್ಧಿವಂತ ಪ್ರಾಣಿಗಳಲ್ಲ ಎನ್ನುವುದು ತಪ್ಪು..ಅವುಗಳ ಜಾಣ್ಮೆಯನ್ನು ನಮಗೆ ಅರ್ಥೈಸಿಕೊಳ್ಳಲಾಗುವುದಿಲ್ಲ ಎಂದೇಕೆ ಹೇಳಲಾಗದು..?
ನಿಮ್ಮ ಕವನ ...ಅವು ತಮ್ಮದೇ ಜಾಣ್ಮೆಯ ಚೌಕಟ್ಟಿನಲ್ಲಿದ್ದರೂ ಋಣಾತ್ಮಕ ಗುಣಗಳಾದ ಛಲ, ಕಪಟ, ಮೋಸ, ದಗಾ, ಪಿತೂರಿ ಎಲ್ಲಾ ಅರಿಯದ ಜೀವಿಗಳು ಎಷ್ಟೋ ಮೇಲಲ್ಲವೇ ನಮ್ಮೆಲ್ಲರಿಗಿಂತ..?

ವಿ.ಆರ್.ಭಟ್ said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

ಶಾಂತಲಾ ಭಂಡಿ said...

ಮನಮುಕ್ತ ಅವರೆ...
ನಾವೂ ಹೀಗೆಯೇ ರೆಕ್ಕೆ ಬಡಿದು ಹಾರುತ್ತ ಮರೆಯಲೇಬೇಕಾಗಿದ್ದನ್ನು ಮರೆತುಬಿಡುವಂತಿದ್ದರೆ ಎಲ್ಲವೂ ಎಷ್ಟು ಸಲೀಸಾಗಿರುತ್ತಿತ್ತಲ್ಲ?

ತುಂಬ ಇಷ್ಟವಾಯ್ತು ಕವನ.

ಜಲನಯನ said...

ಹಕ್ಕಿಯೊಂದು ಹಾಡಿತಿದೆ
ಜೀವ-ಜೀವನ ಸಾರ ಸಾರುತಿದೆ
ನೋಡಿ, ಅರಿಯಲು ಒಳಗಣ್ಣ ನೋಟ ಬೇಕು...
ಹೀಗೆ ಇರಬೇಕು ನಿಮ್ಮ ಕವನದ ತಾತ್ಪರ್ಯ ನಮಗೆ..ಅಲ್ಲವೇ..ಮನಮುಕ್ತಾವ್ರೆ..? ಅಭಿನಂದನೆ..ಚನ್ನಾಗಿದೆ...

ಮನಮುಕ್ತಾ said...

ಹಕ್ಕಿಯ ಜೀವನ ನೋಡಿ ಕವನ ಬರೆದೆ.. ಮತ್ತೆ ಮತ್ತೆ ಕವನವನ್ನು ಓದಿದಾಗ ಜೊತೆಗೆ ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು ಓದಿದಾಗ ಅನೇಕ ಹೊಸ ಭಾವನೆಗಳು ಬ೦ದವು..
ಮತ್ತೆ ಮತ್ತೆ ಬರೆಯಲು ಉತ್ಸಾಹ ಕೊಟ್ಟಿದ್ದೀರಿ.ಬರೆಯುತ್ತೇನೆ.

ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು.ಸದ್ಯ ಸಮಯದ ಅಭಾವವಿರುವುದರಿ೦ದ ಎಲ್ಲರಿಗೂ ಪ್ರತೇಕವಾಗಿ ಧನ್ಯವಾದ ಹೇಳಲು ಆಗುತ್ತಿಲ್ಲ..ಕ್ಶಮೆ ಇರಲಿ..