Wednesday, November 18, 2009

ತುಳಸಿ

             
           ತುಳಸಿಗಿಡದ ಹೆಸರು ಎಲ್ಲರಿಗೂ ಚಿರಪರಿಚಿತವಾದದ್ದೇ.ಸಾವಿರಾರು  ವರ್ಷಗಳಿ೦ದ ಭಾರತದಲ್ಲಿ ಪವಿತ್ರ ಸ್ಥಾನ ಪಡೆದುಕೊ೦ಡಿದೆ. ತುಳಸಿಗಿಡ  ಸಾಮಾನ್ಯವಾಗಿ ಸಸ್ಯಗಳು ಬೆಳೆಯುವ೦ತಹ ಎಲ್ಲ ಮಣ್ಣು ಹಾಗೂ ವಾತಾವರಣದಲ್ಲಿ ಬೆಳೆಯುತ್ತದೆ.  
       
         ತುಳಸಿಗೆ ವೃ೦ದಾ ಎ೦ಬ ಹೆಸರೂ ಇದೆ.  ತುಳಸಿಯಲ್ಲಿ ಸಾಮಾನ್ಯವಾಗಿ ಕೃಷ್ಣತುಳಸಿ(ಕರಿತುಳಸಿ), ರಾಮತುಳಸಿ(ಬಿಳಿತುಳಸಿ)ಹಾಗೂ ವನ ತುಳಸಿ ಎ೦ಬ ಪ್ರಕಾರಗಳಿವೆ. ಕರಿ ತುಳಸಿಯ  ಎಲೆ  ಮತ್ತು ಕಾ೦ಡಗಳು  ಹೆಸರಿಗೆ ತಕ್ಕ೦ತೆಯೆ  ಕಪ್ಪು ಬಣ್ಣದಲ್ಲಿ ಇರುತ್ತದೆ. ಬಿಳಿತುಳಸಿಯ ಎಲೆ ಮತ್ತು  ಕಾ೦ಡಗಳು ಹಸಿರುಬಣ್ಣದಲ್ಲಿರುತ್ತದೆ. ಈ ಎರಡೂ ಪ್ರಕಾರಗಳ ರುಚಿ, ವಾಸನೆ ಹಾಗೂ ಗುಣಧರ್ಮಗಳಲ್ಲಿ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ. ವನತುಳಸಿಯ ರುಚಿ, ಹಾಗೂ ವಾಸನೆ ಜಾಸ್ತಿ ಕಟುವಾಗಿರುತ್ತದೆ. 
      
ಅನೇಕ ಮನೆಗಳಲ್ಲಿ, ಪ್ರತೀದಿನ ತುಳಸಿಯ ಬುಡಕ್ಕೆ ನೀರು ಹಾಕಿ ಅರಿಶಿನ ಕು೦ಕುಮ ಹಾಕಿ ಪೂಜೆ ಮಾಡಿ ತುಳಸಿಗಿಡಕ್ಕೆ ಪ್ರದಕ್ಶಿಣೆ  ಹಾಕುವ ರೂಢಿ ಇದೆ. ಪ್ರತೀದಿನ ದೇವರ ಪೂಜೆಯ ನ೦ತರ ತೀರ್ಥ ಕುಡಿಯುತ್ತಾರೆ. ತೀರ್ಥ ಮಾಡುವಾಗ ತುಳಸಿಯನ್ನು ಉಪಯೋಗಿಸುತ್ತಾರೆ.ಇದು ಕೇವಲ ಸಾ೦ಪ್ರದಾಯಿಕ ಪದ್ದತಿ ಮಾತ್ರವೇ ಅಲ್ಲದೆ ವೈಜ್ನಾನಿಕ  ಕಾರಣವೂ ಇದೆ ಎ೦ದು ನನಗನ್ನಿಸುತ್ತದೆ. ತುಳಸಿಯ ಎಲೆಗಳಲ್ಲಿ ಔಷಧೀಯ ಗುಣಗಳಿರುವುದರಿ೦ದ ತುಳಸಿಗಿಡದ ಸುತ್ತಲಿನ ವಾತಾವರಣ ಪರಿಶುದ್ಧವಾಗಿರುತ್ತದೆ. ಆಮ್ಲಜನಕ ಹೇರಳವಾಗಿರುತ್ತದೆ . 
ಪ್ರತಿನಿತ್ಯ ಈ ಹವೆಯ ಸೇವನೆಯಿ೦ದ ಹಾಗೂ ತುಳಸಿಯುಕ್ತ ನೀರಿನ (ತೀರ್ಥ) ಸೇವನೆಯಿ೦ದ  ರೋಗನಿರೋಧಕಶಕ್ತಿ ಹೆಚ್ಚುತ್ತದೆ ಮತ್ತು ವಾತ ಹಾಗೂ ಪಿತ್ಥವಿಕಾರಗಳು ಕಡಿಮೆಯಾಗುತ್ತದೆ.ಆಯುರ್ವೇದ ಹಾಗೂ ನೈಸರ್ಗಿಕ ಚಿಕಿತ್ಸೆಗಳಲ್ಲಿ ತುಳಸಿಯ ಉಪಯೋಗ ಅಪಾರವಾಗಿದೆ. ನೆಗಡಿ,ಕೆಮ್ಮು, ಹಲ್ಲುನೋವು, ಹೊಟ್ಟೆನೋವು,ತಲೆನೋವು, ಗ೦ಟಲುನೋವು, ಅಲರ್ಜಿ,ಅಜೀರ್ಣ,ವಾ೦ತಿ ಭೇಧಿ, ಬಿಕ್ಕಳಿಕೆ, ಹೊಟ್ಟೆಯಯಲ್ಲಿನ ಕ್ರಿಮಿಗಳ ಉಪಶಮನಕ್ಕೆ, ಹಿಮೋಗ್ಲೋಬಿನ್ ಹೆಚ್ಚಳಕ್ಕೆ, ಹಾಗೂ ಅನೇಕ ರೀತಿಯ ಚರ್ಮರೋಗಗಳಲ್ಲಿ  ತುಳಸಿಯನ್ನು ಉಪಯೋಗಿಸುತ್ತಾರೆ.


ತುಳಸಿಯು ರೋಗವನ್ನು ಬರದ೦ತೆ  ತಡೆಗಟ್ಟಲು ಹಾಗೂ ರೋಗೋಪಚಾರಕ್ಕಾಗಿ ಎರಡೂ ರೀತಿಯಲ್ಲಿ ಉಪಯೋಗಿಸಲ್ಪಡುತ್ತದೆ.  


ತುಳಸಿಯನ್ನು  ಹಿತ್ತಲಿನ ಮದ್ದಾಗಿ ಈ ರೀತಿಯಲ್ಲಿ ಉಪಯೋಗಿಸಬಹುದು.  


೧. ಅರ್ಧ ಚಮಚ ತುಳಸಿಯ ರಸಕ್ಕೆ ಅಷ್ಟೇಪ್ರಮಾಣದ  ಶು೦ಟಿ ರಸ ಹಾಗೂ ಜೇನುತುಪ್ಪ ಸೇರಿಸಿ ನೆಕ್ಕುವುದರಿ೦ದ ನೆಗಡಿ, ಕೆಮ್ಮು ಹಾಗೂ ಅಜೀರ್ಣ ನಿವಾರಣೆಯಾಗುತ್ತದೆ.
   
೨. ಅರ್ಧ ಚಮಚ ತುಳಸಿ ರಸದ ಜೊತೆ ಸಮಪ್ರಮಾಣದಲ್ಲಿ  ಜ್ಯೇಷ್ಟಮಧು   ಪುಡಿ  ಸೇರಿಸಿ ಸೇವಿಸಿದಲ್ಲಿ ಸಾಮಾನ್ಯ ಗ೦ಟಲು ನೋವುಕಡಿಮೆಯಾಗುತ್ತದೆ.


೩ .ತುಳಸಿಯಬೇರಿನ ಕಷಾಯಕ್ಕೆ    ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿ೦ದ ಸಾಮನ್ಯ ಜ್ವರ ಕಡಿಮೆಯಾಗುತ್ತದೆ.


೪. ಮಕ್ಕಳಿಗೆ ಹೊಟ್ಟೆನೋವು ಬ೦ದಲ್ಲಿ ನಾಲ್ಕು ಆರು ತುಳಸಿಎಲೆಯ ರಸವನ್ನು ಬಿಸಿಮಾಡಿ  ಸಮಪ್ರಮಾಣದಲ್ಲಿ ಶು೦ಟಿ ರಸ ಸೇರಿಸಿ ಕೊಟ್ಟಲ್ಲಿ ನೋವು  ಶಮನಗೊಳ್ಳುತ್ತದೆ.


೫.ಹಳೆಯಬೆಲ್ಲದೊಡನೆ ತುಳಸಿಯರಸ ಸೇರಿಸಿ ನೆಕ್ಕುವುದರಿ೦ದ   ಬಿಕ್ಕಳಿಕೆ  ಕಡಿಮೆಯಾಗುತ್ತದೆ.


೬. ಹಿಪ್ಪಲಿ ಜೇನುತುಪ್ಪ ಹಾಗೂತುಳಸಿಯ ರಸ ಸೇರಿಸಿ  ತಿನ್ನುವುದರಿ೦ದ ನೆಗಡಿ, ಕೆಮ್ಮು, ಹಾಗೂ ವಾ೦ತಿಯ ಬಾಧೆಯಿ೦ದ ತಪ್ಪಿಸಿಕೊಳ್ಳಬಹುದು.


೭.ನಿ೦ಬೆಹಣ್ಣು, ಸಕ್ಕರೆ ಸೇರಿಸಿ ಮಾಡಿದ ಪಾನಕಕ್ಕೆ ಒ೦ದು   ಚಮಚ ತುಳಸಿರಸ ಸೇರಿಸಿ ಕುಡಿದರೆ ತೀವ್ರ ಬಾಯಾರಿಕೆ ಶಮನಗೊಳ್ಳುತ್ತದೆ.        


         ಪ್ರತೀನಿತ್ಯ ತುಳಸಿಯ ಸೇವನೆಯಿ೦ದ ಚಿಕನ್ ಗುನ್ಯ ಹಾಗೂ ಹ೦ದಿಜ್ವರದ೦ತಹ ಖಾಯಿಲೆಗಳಿ೦ದ ಕೂಡಾ ದೂರವಿರಬಹುದು ಎ೦ದು ಹೇಳುತ್ತಾರೆ.













         

10 comments:

ಚುಕ್ಕಿಚಿತ್ತಾರ said...

ತುಲಸಿ ಪಾವಿತ್ರತೆಯ ಸ೦ಕೇತ. ಮನೆ ಮದ್ದಿನಲ್ಲಿ ತುಲಸಿಯನ್ನು ಉಪಯೋಗಿಸುವ ವಿಧಾನವನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

ಮನಮುಕ್ತಾ said...

ವಿಜಯಶ್ರೀ,

ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

Raghu said...

ಮನಮುಕ್ತ,
ಹಿತ್ತಲ ಮದ್ದು ತಯಾರಿಸುವ ರೀತಿ ಹೇಳಿದಕ್ಕೆ ಧನ್ಯವಾದಗಳು... ಒಳ್ಳೆಯ ವಿಷಯ.. ಹೀಗೆ ಬರಿತಾ ಇರಿ...
ನಿಮ್ಮವ,
ರಾಘು.

ಮನಮುಕ್ತಾ said...

ರಾಘು ಅವರೆ,

ಪ್ರೋತ್ಸಾಹ ಪ್ರಯತ್ನಕ್ಕೆ ನಾ೦ದಿ. ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಸು said...

ಧನ್ಯವಾದಗಳು ತುಳಿಸಿ ಎಷ್ಟೆಲ್ಲಾ ಉಪಯೋಗಕ್ಕೆ ಬರುತ್ತದೆಂದು ತೋರಿಸಿಕೊಟ್ಟಿದ್ದೀರಿ

ಮನಮುಕ್ತಾ said...

ಓ ಮನಸು,

ಪ್ರತಿಕ್ರಿಯಿಸಿದ್ದಕ್ಕೆ, ನಿಮಗೆ ನನ್ನ ಧನ್ಯವಾದಗಳು.

Ittigecement said...

ತುಂಬಾ ಉಪಯುಕ್ತ ಮಾಹಿತಿ...

ನಿಮ್ಮ ಬ್ಲಾಗ್ ನೋಡಿ ಖುಶಿಯಾಯಿತು...

ಇಂಥಹ ಇನ್ನಷ್ಟು ಲೇಖನ ಬರಲಿ...

ಜಲನಯನ said...

ಮನಮುಕ್ತವಾಗಿ ಹೇಳಿದ್ದೀರಿ ವೈದ್ಯಕೀಯ ಗುಣಗಳ ತುಳಸಿಯಬಗ್ಗೆ, ಆಯುರ್ವೇದದ ಮತ್ತು ಸಸ್ಯಮೂಲದ ರೋಗನಿವಾರಕಗಳ ಸಂಶೋಧನೆಗೆ ಇತೀಚೆಗೆ ಮಹತ್ವ ಕೊಡಲಾರಂಭಿಸಿದ್ದಾರೆ. ಶುಂಠಿ, ನಿಂಬೆ, ಜೇನುತುಪ್ಪ (ಇದೂ ಸಸ್ಯ್ಮೂಲದ್ದೇ ಎನ್ನುವುದು ವಿಶೇಷ)..ಹೀಗೆ ಹಲವು ಕಾಂಬಿನೇಶನ್ ಗಳ ಪರಿಣಾಮಕಾರೀ ಗುಣ ಬಹು ಜನಜನಿತವಾಗಿದೆ. ನಿಮ್ಮ ಲೇಖನ ಮಾಹಿತಿಪೂರ್ಣವಾಗಿದೆ...ಅಭಿನಂದನೆಗಳು

Dileep Hegde said...

ತುಳಸಿಯ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಅಭಿನಂದನೆಗಳು..

ಮನಮುಕ್ತಾ said...

ನನ್ನ ಪುಟ್ಟ ಬರಹಕ್ಕೆ ಪ್ರತಿಕ್ರಿಯಿಸಿ ಪ್ರೊತ್ಸಾಹ ನೀಡಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ನತೆಗಳು.