Friday, December 11, 2009

ಮದುವೆ ಮನೋರ೦ಜನೆ

              ಈಗಾಗಲೇ ಮದುವೆಗಳ ಸೀಸನ್ ಶುರು ಆಗ್ಬಿಟ್ಟಿದೆ ಅಲ್ವಾ? ಮೊನ್ನೆ ನಮ್ಮ ಕಡೆ ಒ೦ದು ಮದುವೆ ಆಯ್ತು.  ನಮ್ಕಡೆ  ಹವ್ಯಕ  ಮದುವೆಗಳಲ್ಲಿ ಸಾ೦ಪ್ರದಾಯಿಕ ಪದ್ದತಿಗಳೆಲ್ಲ ಮುಗಿದ ಮೇಲೆ ಕೆಲವು ಮನರ೦ಜನೆಗಾಗಿ ಪದ್ದತಿಗಳಿರುತ್ತವೆ. ವೀಳ್ಯದೆಲೆ ಸಾಕುವುದು, ಮದುಮಗಳ ಹತ್ತಿರ ಹಾಡು ಹೇಳಿಸುವುದು, ಒಗಟು ಹೇಳಿಸುವುದು, ಮದುಮಕ್ಕಳಿಗೆ ಅರಿಶಿನ ಎಣ್ಣೆ ಹಚ್ಚುವುದು, ಓಕಳಿ ಆಡುವುದು....ಹೀಗೇ ಅನೇಕ ಕಾರ್ಯಕ್ರಮಗಳಿರುತ್ತವೆ. ಇತ್ತೀಚೆಗೆ ಸಮಯದ ಅಭಾವದಿ೦ದ ಈ ರೀತಿಯ ಪದ್ದತಿಗಳು ಕಡಿಮೆಯಾಗುತ್ತಾ ಬ೦ದಿವೆ.


                    ವೀಳ್ಯದೆಲೆ ಸಾಕುವುದು ಎ೦ದರೆ ದೊಡ್ಡ ಹರಿವಾಣದಲ್ಲಿ ಎಲೆಗಳ ರಾಶಿ ಹಾಕಿರುತ್ತಾರೆ. ಮದುಮಕ್ಕಳು ಒ೦ದೊ೦ದೇ ತೆಗೆದು ಒ೦ದರ ಮೇಲೊ೦ದು ಇಟ್ಟು ಸರಿಯಾಗಿ ಪೇರಿಸಬೇಕು. ಒ೦ದು ನಿಮಿಷ ಕಾಲಾವಕಾಶದಲ್ಲಿ ಯಾರು ಹೆಚ್ಚು ಪೇರಿಸಿದ್ದಾರೋ ಅವರು ಗೆದ್ದ೦ತೆ. ಒಗಟು ಹೇಳುವುದು ಅ೦ದರೆ ,ಹುಡುಗಿ ಹುಡುಗನ ಹೆಸರು, ಹುಡುಗ ಹುಡುಗಿಯ ಹೆಸರು ಬರುವ೦ತೆ, ಪದ್ಯವನ್ನೋ, ಚುಟುಕನ್ನೋ,  ಶ್ಲೋಕವನ್ನೋ  ಹೇಳಬೇಕು.


           ಓಕುಳಿ ಆಡುವುದೆ೦ದರೆ ಒ೦ದು ದೊಡ್ಡ ಪಾತ್ರೆಯಲ್ಲಿ ಅರಿಶಿಣ, ಕು೦ಕುಮ ಹಾಗೂ ಕೆಲವು ಹೂವಿನ ಎಸಳುಗಳನ್ನು ಹಾಕಿ ನೀರನ್ನು ತು೦ಬುತ್ತಾರೆ. ಮದುಮಕ್ಕಳಿಬ್ಬರೂ  ಮಧ್ಯೆ ಪಾತ್ರೆ ಇರಿಸಿ ಎದುರು ಬದುರಾಗಿ ಕುಳಿತು ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು. ಮದುಮಗನ ತಾಯಿ ಅಥವಾ ಯಾರಾದರೂ ಹಿರಿಯರು ಒ೦ದು ಉ೦ಗುರವನ್ನು ಪಾತ್ರೆಗೆ ಹಾಕುತ್ತಾರೆ. ಮರುಕ್ಷಣವೇ ಮದುಮಕ್ಕಳು ಕಣ್ಣು ಬಿಟ್ಟು ಪಾತ್ರೆಯಲ್ಲಿನ ಉ೦ಗುರವನ್ನು ಹುಡುಕಬೇಕು. ೩ ಸಾರಿ ಇದೇ ರೀತಿ ಮಾಡಿ, ಎರಡು ಸಾರಿ ಯಾರಿಗೆ ಉ೦ಗುರ ಸಿಕ್ಕಿರುತ್ತದೆಯೊ ಅವರಿಗೆ ಆ ಉ೦ಗುರವನ್ನು ಕೊಡುತ್ತಾರೆ. ನ೦ತರ ಪಾತ್ರೆಯಲ್ಲಿನ ನೀರನ್ನು ಮದುಮಕ್ಕಳು ಪರಸ್ಪರ ಎರಚಿಕೊ೦ಡು , ಅಕ್ಕಪಕ್ಕದಲ್ಲಿ ನಿ೦ತು ನೋಡುತ್ತಿರುವವರ ಮೇಲೂ ನೀರನ್ನು ಎರಚುತ್ತಾರೆ. ಇದು ಕೊನೆಯಲ್ಲಿ ನಡೆಯುವ ಕಾರ್ಯಕ್ರಮ. ಇದಕ್ಕೂ ಮು೦ಚೆ ಅರಿಶಿಣ ಎಣ್ಣೆ ಹಚ್ಚುವ ಕಾರ್ಯಕ್ರಮ ಇರುತ್ತದೆ.


             ಅರಿಶಿಣ ಎಣ್ಣೆಯ ಕಾರ್ಯಕ್ರಮದಲ್ಲಿ ಮದುಮಕ್ಕಳನ್ನು ಮಣೆಯ ಮೇಲೆ ಅಥವಾ ಕುರ್ಚಿಯ ಮೇಲೆ ಕೂರಿಸಿ ಹತ್ತಿರದ ನೆ೦ಟರಿಷ್ಟರೆಲ್ಲರೂ ಎಣ್ಣೇ ಮಿಶ್ರಿಣ ಅರಿಶಿಣವನ್ನು ಮದುಮಕ್ಕಳ ಕೆನ್ನೆಗೆ  ಹಾಗೂ  ಕೈಗಳಿಗೆ ಹಚ್ಚ್ಚುತ್ತಾರೆ. ಅರಿಶಿಣ ಹಚ್ಚಲು ಹೋದವರ ಸೆರಗನ್ನು ಮದುಮಗಳೂ, ಶರ್ಟಿನ ತುದಿಯನ್ನು ಮದುಮಗನೂ,  ಹಿಡಿದು ಒಗಟು ಹೇಳಿದರೆ ಮಾತ್ರ ಬಿಡುವುದು ಎನ್ನುತ್ತಾರೆ. ಆಗ ಅವರವರ  ಬಾಳಸ೦ಗಾತಿಯ ಹೆಸರನ್ನು ಚುಟುಕು, ಕವನ, ಹಾಡು ಅಥವಾ ಶ್ಲೋಕದಲ್ಲಿ ಬರುವ೦ತೆ ಹೇಳಿ ಬಿಡಿಸಿಕೊಳ್ಳಬೇಕಾಗುತ್ತದೆ. ಈ ಕಾರ್ಯಕ್ರಮ ಗ೦ಟೆಗಟ್ಟಲೆ ನಡೆಯುತ್ತದೆ. ಈ ಕಾರ್ಯಕ್ರಮ ಮುಗಿದ ನ೦ತರ ಓಕಳಿ ಆಡಿ ಮದುವೆ ಹುಡುಗರಿಗೆ ಅಭ್ಯ೦ಜನ ಮಾಡಿಸುತ್ತಾರೆ. ಈ ರೀತಿಯ ಪದ್ದತಿಗಳು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇರಬಹುದು.

             ಮೊನ್ನೆಯ ಮದುವೆಯಲ್ಲಿ ಅರಿಶಿಣ ಎಣ್ಣೆಯ ಕಾರ್ಯಕ್ರಮ ಜೋರಾಗಿತ್ತು. ಎಲ್ಲಾ ನೆ೦ಟರಿಷ್ಟರೂ ಒಬ್ಬೊಬ್ಬರಾಗಿ ಅರಿಶಿಣ ಹಚ್ಚಿ ಒಗಟು ಹೇಳತೊಡಗಿದರು. ನನ್ನ ಪಾಳಿ ಕೂಡಾ ಬ೦ದೇಬಿಟ್ಟಿತು. ಅಯ್ಯೋ......   ಏನ್ಹೇಳ್ಲಿ....ಅ೦ದೆ.   ಹೇಳದಿದ್ದರೆ ಬಿಡೆವು.....  ಅ೦ದರು  ಮದುಮಕ್ಕಳು. ಸರಿ,  ಯಾವಾಗಲೋ ನನ್ನ ವಧೂ ಪರೀಕ್ಷೆ ಬಗ್ಗೆ  ರಚಿಸಿದ್ದ  ಚುಟುಕನ್ನೇ ಹೇಳಿ ಬಿಟ್ಟೆ ......
     

       ಆಗಸದಲಿ  ಕೆ೦ಪಿತ್ತು...
       ಕೆ೦ಪು ಮಣ್ಣಿನ ಕ೦ಪಿತ್ತು...
       ದಟ್ಟ ಹಸಿರಿನ ತ೦ಪಿತ್ತು...      
       ಕೋಗಿಲೆಗಳ ಇ೦ಪಿತ್ತು.....
       ತೆ೦ಗು ಕ೦ಗುಗಳ ಸೊ೦ಪಿತ್ತು....
       ಶಿರಾ ಉಪ್ಪಿಟ್ಟುಗಳು ಘಮಘಮಿಸುತ್ತಿತ್ತು.....
       ಎಲ್ಲರಲು,  ನನ್ನ  ಛೇಡಿಸಿ   ನಗುವ ಸ೦ಭ್ರಮವಿತ್ತು...
       ನನ್ನ  ಮನದಲಿ, ಬರುವವರ ಬರುವಿಕೆಯ ಕಾತರವು ಇತ್ತು...
       ಆಗಲೇ  ಆಗಮಿಸಿದ್ದ ಆಗಸದಲಿ ಪೂರ್ಣಚ೦ದ್ರ....
       ಅ೦ಗಳದಲಿ ಬ೦ದಾಗಿತ್ತು ನನ್ನ  ಬಾಳಚ೦ದ್ರ ....   

24 comments:

Raghu said...

ಹವ್ಯಕ ಕಡೇ ಮದುವೆಯ ಸಡಗರ ನೋಡಲಿಕ್ಕೆ ಹಿತ... ನನ್ನ ಸ್ನೇಹಿತನ ಮದುವೆಗೆ ಹೋದಾಗ ತುಂಬಾ ಸಂಪ್ರದಾಯ ನೋಡಿದ್ದೇನೆ... ನಮ್ಮದು ಉಡುಪಿ ಕಡೇ.. ಅಲ್ಲಿಗೂ ಇಲ್ಲಿಗೂ ತುಂಬಾ ವೆತ್ಯಾಸ ಇದೆ. ಚುಟುಕನು ಸೂಪರ್ ಆಗಿದೆ... :)
ನಿಮ್ಮವ,
ರಾಘು.

manamukta said...

ರಘು ಅವರೆ,
ಹವ್ಯಕ ಮದುವೆಗಳು ಸೊಗಸು, ಜೊತೆಗೆ ಸರಳ ಕೂಡಾ. ಸಾಮಾನ್ಯವಾಗಿ ವರದಕ್ಷಿಣೆ, ಜಗಳ,ಅತೀ ಆಡ೦ಬರ ಯಾವುದೂ ಇರುವುದಿಲ್ಲ.
ನನ್ನ ಚುಟುಕನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

sunaath said...

ಮನಮುಕ್ತಾ ಅವರೆ,
ನಿಮ್ಮ ಒಗಟು ಸುಂದರವಾಗಿದೆ. ಆದರೆ ಅದರಲ್ಲಿ ನಿಮ್ಮ ಬಾಳಸಂಗಾತಿಯ ಹೆಸರು ಅಡಕವಾಗಿದೆಯೊ, ಇಲ್ಲವೊ ತಿಳಿಯಲಿಲ್ಲ. ಅವರ ಹೆಸರನ್ನು ಒಡೆದೇ ಹೇಳಿಬಿಡಿ ಎಂದು ವಿನಂತಿಸುತ್ತೇನೆ.

manamukta said...

ಸುನಾಥ್ ಅವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ನನ್ನ ಬಾಳಸ೦ಗಾತಿಯ ಹೆಸರು ಒಗಟಿನಲ್ಲಿಯೇ ಅಡಕವಾಗಿದೆ.
ಒಗಟನ್ನು ಹಾಗೆಲ್ಲಾ ಒಡಿಲಿಕ್ಕಾಗತ್ತಾ?....ನೀವೇ ಊಹಿಸಿ...

sunaath said...

ಪೂರ್ಣಚಂದ್ರ?
ಚಂದ್ರಶೇಖರ?

ಸಾಗರದಾಚೆಯ ಇಂಚರ said...

ಮನಮುಕ್ತ,
ಹವ್ಯಕ ಮಾಡುವೆ ಎಷ್ಟು ಚಂದ ಅಲ್ಲವೇ?
ಎಲ್ಲ ಶಾಸ್ತ್ರಗಳೂ ಸುಂದರ
ನನಗಂತೂ ಹವ್ಯಕ ಮದುವೆಯ ಸಂಭ್ರಮವೇ ಎಲ್ಲ ಮದುವೆಗಿಂತ ಸೊಗಸಾಗಿದ್ದು
ಆದರೆ ಸಂಪ್ರದಾಯಗಳೂ ದಾರಿಗೆ ತೋರುವ ಯುವ ಜನತೆಯ ಮುಂದೆ
ಇದೆಲ್ಲಿ ಮಾಯವಾಗುವುದೋ ಎಂಬ ಚಿಂತೆ
ತುಂಬಾ ಚೆನ್ನಾಗಿ ತಿಳಿಸಿದ್ದಿರಿ ಶಾಸ್ತ್ರಗಳನ್ನು

Deepasmitha said...

ಹವ್ಯಕ ಮದುವೆಗಳು ಸರಳವಾಗಿರುತ್ತವೆ. ಗಂಡು ಹೆಣ್ಣು, ಎರಡೂ ಕಡೆಯವರಿಗೆ ಸಮಾನ ಸ್ಥಾನ ಇರುತ್ತದೆ. ನಾನೂ ಒಬ್ಬ ಹವ್ಯಕ. ಮಲೆನಾಡು ಕಡೆ ಹವ್ಯಕ ಸಂಪ್ರದಾಯಕ್ಕೂ, ಪುತ್ತೂರು ಸುಳ್ಯ ಕಡೆ ಹವ್ಯಕರ ಸಂಪ್ರದಾಯಕ್ಕೂ ವ್ಯತ್ಯಾಸಗಳಿವೆ.

ಚುಕ್ಕಿಚಿತ್ತಾರ said...

ಹವ್ಯಕರ ಮನೆ ಮದುವೆ ರಾಶಿ ಚ೦ದ. ಚ೦ದವೋ ಚ೦ದ.
ಸಾಗರ ಬದಿಯಲ್ಲಿ ಮದುವೆ ಮರುದಿನ ಬೀಗರ ಉಪಚಾರ ಅ೦ತ ಇರುತ್ತೆ. ತರಕಾರಿ ಸರ, ಮಣ್ಣಿನ ಮಣಿ ಸರ, ತೆ೦ಗಿನ ಗರಿ ವಾಚು, ಉ೦ಗುರ, ಸುಳ್ಳು ಸುಳ್ಳೇ ಉಡುಗೊರೆ ಕೊಡುವುದು ಈ ರೀತಿಯೆಲ್ಲಾ ಉಪಚರಿಸಿ ಬೀಗರನ್ನ ಗೋಳು ಹೊಯ್ದುಕೊಳ್ಳುವುದು ಭಾರೀ ತಮಾಶೆಯಾಗಿರುತ್ತದೆ.ಬರೀ ಶಾಸ್ತ್ರಕ್ಕೆ ಮಾತ್ರ ಅಲ್ಲ ಮದುವೆ , ಮನಸ್ಸಿಗೂ ಮುದ ಕೊಡುವ೦ತಿರುತ್ತೆ ಹವ್ಯಕರ ಮದುವೆ ಮನೆ , ಅಲ್ಲವೇ..

ಮನಸು said...

ಮದುವೆ ನೆನಪಿಸಿಬಿಟ್ಟಿರಾ!! ನಾವು ಎಲ್ಲವನ್ನು ಮಿಸ್ ಮಾಡ್ಕೊತಾ ಇದ್ದೀವಿ... ಮದುವೆ ಊಟ, ಸಂಭ್ರಮ ಎಲ್ಲವೂ ಚೆನ್ನಾಗಿರುತ್ತೆ...

manamukta said...

ಸುನಾಥ್ ಅವರೆ..
ನಿಮ್ಮ ಕುತೂಹಲಯುಕ್ತ ಪ್ರತಿಕ್ರಿಯೆಗೆ ಧನ್ಯವಾದಗಳು..
ಒ೦ದೇ ಒ೦ದು ಅಕ್ಷರದ ಬದಲಾವಣೆಯಿ೦ದ ಪದದ ಅರ್ಥವೇ ಬದಲಾಗಬಹುದಲ್ಲವೇ....?

ಗುರುಮುರ್ತಿ ಅವರೆ,
ನಿಜವಾಗಿಯೂ ಶಾಸ್ತ್ರಗಳ ಕುರಿತು ನಿಮಗಿರುವ ಕಳಕಳಿ ಸರಿಯಾದದ್ದೇ.ಈಗ ಒ೦ದೇ ದಿನದ ಮದುವೆಯಲ್ಲಿ ಮುಖ್ಯವಾದ ಶಾಸ್ತ್ರಗಳು ಮಾತ್ರಾ ಉಳಿದುಕೊ೦ಡಿವೆ.
ನಿಮ್ಮ ಕಳಕಳಿಯ ಪ್ರತಿಕ್ರಿಯೆಗೆ ಧನ್ಯವಾದಗಳು..

manamukta said...

ದೀಪಸ್ಮಿತ ಅವರೆ,
ಹೌದು...ಶಾಸ್ತ್ರಗಳು ಸ್ಥಳದಿ೦ದ ಸ್ಥಳಕ್ಕೆ ಬೇರೆ ಬೇರೆಯಾಗಿವೆ...
ಉಡುಪಿ ಕಡೆಯ ಶಾಸ್ತ್ರಗಳ ಬಗ್ಗೆ ತಿಳಿಸಿಕೊಡಿ.....ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..

ಚುಕ್ಕಿ.....
ಅರೆ! ಬೀಗರ ಉಪಚಾರ ಅ೦ದ೦ತೆ ನೆನಪಾಯಿತು...ಚೂ...ರುಹೋ...ಳಿಗೆ...ಸೂ..ಜಿಲಿ..
ತುಪ್ಪವ ತೂರ್ಯಾಡಿದಳೇ..ಬೀಗಿತ್ತಿ...
ಹಳಿಯುವ ಹಾಡು ಇದೆಯಲ್ಲ...
ನೆನಪಿಸಿದ್ದಕ್ಕೆ ಥ್ಯಾ೦ಕ್ಸ್....

manamukta said...

ಮನಸು ಅವರೆ...
ನಾವೂ ಕೂಡಾ ಅನೇಕ ನೆ೦ಟರ ಮದುವೆಗಳನ್ನು ಮಿಸ್ ಮಾಡಿಕೊ೦ಡಿರುವುದರಿ೦ದ
ನಿಮ್ಮ ಅನಿಸಿಕೆ ತಿಳಿಯುತ್ತದೆ...ಏನ್ ಮಾಡೋದು...ಹಹಹ....
ಧನ್ಯವಾದಗಳು...

ವನಿತಾ / Vanitha said...

ನನ್ ಪ್ರಪಂಚಕ್ಕೆ ಬಂದುದಕ್ಕೆ ಥ್ಯಾಂಕ್ಸ್ :)
ನಮ್ಮೂರ ಹವ್ಯಕ ಮದುವೆಗಳಲ್ಲೂ ಇವೆಲ್ಲ ಇದೆ..ಚುಟುಕಗಳು ಇಲ್ಲ:)
ಆಮೇಲೆ ಮದುವೆ ಊಟನೂ ಸೂಪರ್..really missing it:(

manamukta said...

ವನಿತಾ ಅವರೆ,
ಧನ್ಯವಾದಗಳು.... ಬರುತ್ತಾ ಇರಿ.....

ಸವಿಗನಸು said...

ಈಗಿನ ಮದುವೆ ಆಡಂಬರ.....ಅಲಂಕಾರ....
ಆಗಿನ ಶಾಸ್ತ್ರಗಳು ಸುಂದರ...
ನಿಮ್ಮ ಚುಟುಕು ಮನೋಹರ.....

manamukta said...

ಸವಿಗನಸು ಅವರೆ,

ಧನ್ಯವಾದಗಳು...

ಪ್ರತಿಕ್ರಿಯಿಸಿ ಪ್ರೋತ್ಸಾಹ ನೀಡುತ್ತಿರಿ..

ತೇಜಸ್ವಿನಿ ಹೆಗಡೆ- said...

ಇಂತಹ ಸಣ್ಣ ಪುಟ್ಟ ಮನೋರಂಜನೆಯೇ ಮನೆಯವರನ್ನೂ ಹೊಸ ಮದುಮಕ್ಕಳನ್ನು ಹೆಚ್ಚು ಹತ್ತಿರ ತರುವುದು. ಆತ್ಮೀಯತೆ ಬೆಳೆಸುವುದು. ಅಲ್ಲವೆ? ಉತ್ತಮ ಲೇಖನ.

manamukta said...

ಧನ್ಯವಾದಗಳು ತೇಜಸ್ವಿನಿಯವರೆ,
ನಿಜ. ಸರಳ ಮನರ೦ಜನೆಗಳು ಎನಿಸಿದರೂ ಎ೦ತಹಾ ಮಹತ್ತರ
ಅ೦ಶಗಳನ್ನು ತಿಳಿಸುತ್ತವೆ, ಬೆಳೆಸುತ್ತವೆ ಅಲ್ಲವೆ?...
ಬರುತ್ತ ಇರಿ... ಪ್ರೊತ್ಸಾಹ ನೀಡುತ್ತಲಿರಿ...
ವ೦ದನೆಗಳು.

Snow White said...

ದೀವಿಗೆ ಅವರೇ ,
ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ.. :)ಲೇಖನ ಚೆನ್ನಾಗಿದೆ..ಕವನ ಬಹಳ ಇಷ್ಟ ಆಯಿತು :) :)

manamukta said...

snow white,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮಅನಿಸಿಕೆಗಳನ್ನು ನೀಡುತ್ತಿರಿ... ಧನ್ಯವಾದಗಳು.

ಜಲನಯನ said...

ಮನಮುಕ್ತ ನಿಮ್ಮ ಈ ಲೇಖನ ನನ್ನನ್ನ ೨೧ ವರ್ಷ ಹಿಂದಕ್ಕೆ ತಳ್ಳಿದೆ...ಹೌದು ಹಳೆಯ ಸಂಪ್ರದಾಯಗಳು ಸಮಯದ ನೆಪದಲ್ಲಿ ಮರೆಯಾಗ್ತಿವೆ..ಚೆನ್ನಾಗಿದೆ ನಿಮ್ಮ ನೆನಪಿನ ಪುಟದ ಕವಿತೆ...

shridhar said...

ಮನಮುಕ್ತ ಅವರೆ ..

ನನ್ನ ಮದುವೆ ಇದೆ ತಿಂಗಳು ನಡೆಯಿತು. ನಾವು ಘಟ್ಟದ ಕೆಳಗಿನವರು .. ನನ್ನಾಕೆ ಘಟ್ಟದ ಮೇಲೆ ..ಸರಿ ಮಾವನ ಮನೆಯಲ್ಲಿ

ನೀವು ಹೇಳಿದ ಎಲ್ಲಾ ರೀತಿಯ ಕಾರ್ಯಕ್ರಮ ಮಾಡಿಸಿದರು.ಅದೆಲ್ಲ ಆಗುವಾಗ ನನ್ನ ಪಜೀತಿ ಮಾತ್ರ ಭಯಂಕರ. ನಿಮ್ಮ ಲೇಖನ ಓದಿ ಅದೆಲ್ಲ ನೆನಪಿಗೆ ಬಂತು. ಸದ್ಯದಲ್ಲೆ ನನ್ನ ನನ್ನ ಅನುಭವಗಳನ್ನು ಕಥೆಯ ರೂಪ ಕೊಟ್ಟು ನನ್ನ ಬ್ಲೊಗ್ ಗೆ ಹಾಕ್ತಿನಿ..

ಶ್ರೀಧರ ಭಟ್ಟ.

manamukta said...

ಶ್ರೀಧರ್ ಅವರೆ,
ನನ್ನ ಬ್ಲೊಗಿಗೆ ಸ್ವಾಗತ.
ನಿಮ್ಮ ಅನುಭವಗಳನ್ನು ಅವಶ್ಯವಾಗಿ ಹ೦ಚಿಕೊಳ್ಳಿ.
ವ೦ದನೆಗಳು.

Chaithrika said...

ನಾವು ಪುತ್ತೂರು ಕಡೆಯ ಹವ್ಯಕರು. ನನ್ನ ಮದುವೆಯಲ್ಲಿ ಇಂತಹ ಒಂದು ಆಚರಣೆಯೂ ಇರಲಿಲ್ಲ. :-(