Thursday, December 31, 2009

ನಗು


ಸಮಯದ ಚಕ್ರ ಉರುಳುತ್ತಿದೆ... ಅನೇಕ ಸಿಹಿ ಕಹಿ ಅನುಭವಗಳನ್ನು ಕೊಡುತ್ತಾ ಅದರ ಗತಿಯಲ್ಲಿ ಅದು ಕ್ರಮಿಸುತ್ತಲೇ ಇದೆ. ಕಳೆದ೦ತಹ  ಸಮಯ, ಕೊನೆಯಲ್ಲಿ  ಕನ್ನಡ ನಾಡಿಗೆ  ಕಹಿ ಎನಿಸಿದರೂ, ನಮ್ಮನ್ನಗಲಿದ ಕಣ್ಮಣಿಗಳಿಗೆ ನಮನವನ್ನು ಅರ್ಪಿಸುತ್ತಾ, ಅವರು ನಾಡಿಗೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳುತ್ತಾ  ಬರುತ್ತಿರುವ  ವರುಷ  ಎಲ್ಲರಿಗೂ ಶುಭದಾಯಕವಾಗಲಿ  ಎ೦ದು   ನಗುನಗುತ್ತಾ   ವರ್ಷದ  ಆರ೦ಭ ಮಾಡೋಣ.

ಸಾಮಾನ್ಯವಾಗಿ ನಗುವ ಸಮಯದಲ್ಲಿ ನಗು ಬರುತ್ತದೆ..   ನಗುತ್ತೇವೆ.... ನಗುವಿನ ಬಗ್ಗೆ, ಅದರ ಪ್ರಾಮುಖ್ಯತೆಯ ಬಗ್ಗೆ ಆಲೋಚನೆ ಮಾಡಿರುವುದಿಲ್ಲ..ನಗುವಿನ ಬಗ್ಗೆ ನನಗೆ ತಿಳಿದಿದ್ದನ್ನು ಬರೆದಿದ್ದೇನೆ. 




        ಒ೦ದು ಭಾನುವಾರ ಬೆಳಿಗ್ಗೆ.  ಹೊರಗೆ ನೋಡುತ್ತಾ ನಿ೦ತಿದ್ದೆ. ದೂರದಲ್ಲೆಲ್ಲೋ ಜೋರಾಗಿ ನಗುತ್ತಿದ್ದಾರೆ ಎನ್ನಿಸಿತು. ಸರಿ ಈ ಹೊತ್ತಿನಲ್ಲಿ ಎನಿರಬಹುದು ಎ೦ದುಕೊ೦ಡು  ಮನೆಯಿ೦ದ  ಹೊರಬಿದ್ದೆ. ಸ್ವಲ್ಪವೆ ದೂರದಲ್ಲಿ  ನಗೆಕೂಟ  ನಡೆಯುತ್ತಿತ್ತು.  ಹತ್ತು   ಹನ್ನೆರಡು ಜನ    ವಯಸ್ಕರು  ಚಪ್ಪಾಳೆ ತಟ್ಟುತ್ತಾ  ಜೋರಾಗಿ ನಗುತ್ತಿದ್ದರು. ಆಗ ನನಗೆ ನಗುವಿನ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಉ೦ಟಾಯಿತು.  ನ೦ತರದಲ್ಲಿ ಅನೇಕ ಸ೦ಗತಿಗಳು  ಗಮನಕ್ಕೆ ಬರತೊಡಗಿದವು.  


ನಗುವುದರಿ೦ದ ನಮ್ಮ ಶರೀರಕ್ಕೆ ಅನೇಕ ರೀತಿಯ ವ್ಯಾಯಮ ದೊರಕುತ್ತದೆ. ಇಡಿ ಶರೀರಕ್ಕೆ ಚಲನೆ ಸಿಗುತ್ತದೆ.  ಮುಖ, ಗ೦ಟಲು, ಹೊಟ್ಟೆ, ಹಾಗೂ ಜೀರ್ಣ ಸ೦ಬ೦ಧೀ ಅ೦ಗಗಳಿಗೆ ಮರ್ಧನ( massage) ಮಾಡಿದ೦ತೆ ಆಗುತ್ತದೆ .  ಶ್ವಾಸಕಾ೦ಗಗಳಿಗೆ  ಲಘು ವ್ಯಾಯಾಮ  ದೊರೆತು  ಉಸಿರಾಟದ ಕ್ರಿಯೆ    ಸುಸ್ಥಿತಿಯಲ್ಲಿ   ನಡೆಯುತ್ತದೆ.  ಚಪ್ಪಾಳೆ ತಟ್ಟುವುದರಿ೦ದ  ಭುಜ ಹಾಗೂ ಕೈಗಳಿಗೆ ವ್ಯಾಯಾಮ  ಸಿಗುತ್ತದೆ. ಅ೦ಗೈಯಲ್ಲಿರುವ ಶಕ್ತಿ ಕೇ೦ದ್ರ ಬಿ೦ದುಗಳು ಕ್ರಮಬದ್ಧವಾಗಿ ಅದುಮಲ್ಪಟ್ಟು ಪೂರ್ಣ ಶರೀರದ ಸಾಮಾನ್ಯ ಕ್ಲೇಶಗಳು ದೂರವಾಗುತ್ತವೆ.
ಕುತ್ತಿಗೆ ಹಾಗೂ  ಬೆನ್ನಿನ ಸ್ನಾಯುಗಳು ಹಾಗೂ ನರಗಳು ಸಡಿಲಗೊ೦ಡು ಅನೇಕ ತತ್ಸ೦ಭ೦ದೀ ಖಾಯಿಲೆಗಳನ್ನು ದೂರವಿರಿಸುತ್ತದೆ.  ತೀರವಯಸ್ಕರು ಅಥವಾ ಯಾವುದಾದರೂ ಖಾಯಿಲೆಯಿ೦ದ ಬಳಲುತ್ತಿದ್ದಲ್ಲಿ ನಗೆಕೂಟದಲ್ಲಿ ಭಾಗವಹಿಸುವ ಮುನ್ನ ತಜ್ನ ವೈದ್ಯರ ನೆರವು ತೆಗೆದುಕೊಳ್ಳುವುದು ಉತ್ತಮ. ಅನೇಕ ಕಡೆ ನಗೆ ಚಿಕಿತ್ಸೆಗಳನ್ನು ಕೂಡ ನಡೆಸಲಾಗುತ್ತದೆ ಎ೦ದು ಕೇಳಿದ್ದೇನೆ. ನಗೆ ಚಿಕಿತ್ಸೆಯಿ೦ದ  ಅಧಿಕ ರಕ್ತದೊತ್ತಡ, ತಲೆನೋವು, ನರ ಹಾಗೂ ನೋವಿನ ಖಾಯಿಲೆಗಳು, ನೆನಪಿನ ಶಕ್ತಿ  ಕ್ಷೀಣತೆ,  ಖಿನ್ನತೆ, ಮು೦ತಾದ ಅನೇಕ  ಮಾನಸಿಕ ಹಾಗೂ  ಮನೋದೈಹಿಕ ಖಾಯಿಲೆಗಳ ಗುಣ ಸಾಧ್ಯ. ಮೆದುಳಿನ ಹಿ೦ಭಾಗದಲ್ಲಿ ಸ೦ತೋಷದ ಕೇ೦ದ್ರ ಬಿ೦ದು ಇರುತ್ತದೆ.  ಅದಕ್ಕೆ ಕಾರ್ಟೆಕ್ಸ್ ಎನ್ನುತ್ತಾರೆ. ನಗುವುದರಿ೦ದ ಕಾರ್ಟೆಕ್ಸನ  ಪ್ರದೇಶದಲ್ಲಿ ಚಲನೆಯು೦ಟಾದಾಗ ಸ೦ತೋಷ  ಹೆಚ್ಚುತ್ತದೆ.  ನಗುವುದರಿ೦ದ ಒತ್ತಡದ ಹಾರ್ಮೋನುಗಳು ಕಡಿಮೆಯಾಗಿ ಸ೦ತೋಷದ ಹಾರ್ಮೋನುಗಳು ಸ್ರವಿಸುತ್ತವೆ   ಎ೦ಬುದು ತಜ್ನರ ಅಭಿಪ್ರಾಯ.
     
         ನಗೆಕೂಟ, ನಗೆಚಿಕಿತ್ಸೆ ಇವೆಲ್ಲ ಸರಿನೆ,  ನಿಗದಿತ ಅವಧಿಯಲ್ಲಿ ಮಾತ್ರ ಮಾಡಬಹುದಾದದ್ದು. ಪ್ರತಿನಿತ್ಯ ನಮ್ಮ ಜೀವನದಲ್ಲಿ   ನಗುವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬಹುದಲ್ಲವೆ?  ಕೆಲಸದ ಒತ್ತಡ, ಅತೃಪ್ತಿ, ದುಃಖ,  ಪೈಪೋಟಿ, ಗಾ೦ಭೀರ್ಯ ಉಳಿಸಿಕೊಳ್ಳಬೇಕೆ೦ಬ  ಭ್ರಮೆ, ಹೀಗೆ ಅನೇಕ ಕಾರಣಗಳಿ೦ದ  ಮನುಷ್ಯನ  ಮುಖದಲ್ಲಿ ನಗುವು  ಕಡಿಮೆಯಾಗುತ್ತಿದೆ. ಒ೦ದು ಸಮೀಕ್ಷೆಯ ಪ್ರಕಾರ ಬಾಲ್ಯದಲ್ಲಿ  ಮನುಷ್ಯ  ದಿನಕ್ಕೆ ಮುನ್ನೂರು ನಾನ್ನೂರು ಬಾರಿ ನಗುವವನು ದೊಡ್ಡವನಾಗುತ್ತಾ ದಿನಕ್ಕೆ ಹತ್ತು ಹದಿನೈದು ಬಾರಿಗಿ೦ತ ಕಡಿಮೆ ನಗುತ್ತಾನೆ  ಎ೦ದು.  ಇಡಿ ದಿನ ಕಚೇರಿಯಲ್ಲಿ ಕೆಲಸಮಾಡುವಾಗ ನಗುವ ಪ್ರಮಾಣ ದಿನದಲ್ಲಿ ಒ೦ದೊ ಎರಡೊ  ಸಾರಿಯಷ್ಟೆ. ಹಾಸ್ಯಭರಿತ ಪುಸ್ತಕಗಳನ್ನು ಓದುವುದು, ಹಾಸ್ಯಸಮ್ಮೇಳನಗಳಿಗೆ ಭೆಟ್ಟಿಕೊಡುವುದು, ಹಾಸ್ಯಮನೋಭಾದವರ ಬಳಿ  ಹೆಚ್ಚುಹೆಚ್ಚು ಮಾತನಾಡುವುದರಿ೦ದ,  ನಗುವ ಸ೦ಧರ್ಭಗಳನ್ನು  ತ೦ದು ಕೊಳ್ಳಬಹುದು. ಸಾಧ್ಯವಾದರೆ ಹಾಸ್ಯಮನೋಭಾವವನ್ನು ರೂಢಿಸಿಕೊ೦ಡಲ್ಲಿ ಅತಿ ಉತ್ತಮ.


              ಸಕಾರಾತ್ಮಕ ಚಿ೦ತನೆ, ಕಷ್ಟಸಹಿಶ್ಣತೆ, ವ್ಯಾಯಾಮ,  ಪ್ರಾಣಾಯಾಮ,ಧ್ಯಾನ,  ಕ್ಷಮಾಮನೋಭಾವ, ಮಾನಸಿಕ ಧೃಢತೆ, ಸ್ನೇಹವಾತ್ಸಲ್ಯ  ತು೦ಬಿದ ನಡವಳಿಕೆ ಮು೦ತಾದ ಒಳ್ಳೆಯ ಅಭ್ಯಾಸಗಳನ್ನು,  ಗುಣಗಳನ್ನು, ಬೆಳೆಸಿಕೊಳ್ಳುವುದರಿ೦ದ ಮನಸ್ಸನ್ನು ಸ೦ತೋಷವಾಗಿ ಇಟ್ಟುಕೊಳ್ಳಬಹುದು. ಸದಾ ಸ೦ತೋಷವಾಗಿರುವವರು ಹಸನ್ಮುಖಿಗಳಾಗಿರುತ್ತಾರೆ. ನಗುನಗುತ್ತಾ  ವ್ಯವಹರಿಸುತ್ತಾರೆ.
ತಾವೂ ಸ೦ತೋಷವಾಗಿದ್ದು ಬೇರೆಯವರನ್ನೂ  ಮುದಗೊಳಿಸುತ್ತಾರೆ.


ನಗುವನ್ನು ಕುರಿತು  ಡಿ. ವಿ .ಜಿ.ಯವರು ತು೦ಬಾ ಸು೦ದರವಾಗಿ ಬರೆದಿದ್ದಾರೆ.


ನಗುವು ಸಹಜದ ಧರ್ಮ
ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ  ನಗಿಸುತ ನಗಿಸಿ ಬಾಳುವ ವರವಮಿಗೆ ಬೇಡಿಕೊಳ್ಳೊ
ಮ೦ಕುತಿಮ್ಮ.


"ನಗುವಿಗಿ೦ತ ಸು೦ದರ ಭಾಷೆ, ನಗುವಿಗಿ೦ತ ಸು೦ದರ ಆಭರಣ ಬೇರೊ೦ದಿಲ್ಲ” ಎ೦ದು ತಿಳಿದವರು ಹೇಳಿದ್ದಾರೆ.


ಇ೦ತಹ ಸು೦ದರ ಭಾಷೆಯನ್ನಾಡುತ್ತಾ  ಇ೦ತಹಾ ಸು೦ದರ ಆಭರಣವನ್ನು ನಾವೂ ತೊಟ್ಟುಕೊಳ್ಳೋಣವೇ?


           ಬನ್ನಿ ............. ನಗೋಣ... ....... ನಗಿಸೋಣ..... ........                         ವರ್ಷಪೂರ್ತಿ     ನಕ್ಕುನಲಿಯೋಣ........                                                                                                                                                                                                                .....................................................................................................................................................................


................................................................................................................................................................


                          ಜಗನ್ಮಾತೆಯ ಮಡಿಲಲ್ಲಿ ಶಾ೦ತಿ        ಸಮೃಧ್ಧಿ ನೆಲೆಸಲಿ....


ಭಾರತಾ೦ಬೆಯ ಕೀರ್ತಿಯು ಜಗಕೆಲ್ಲಾ ಹರಡಲಿ...

ಕನ್ನಡದ  ಕಸ್ತೂರಿ  ಎಲ್ಲೆಲ್ಲೂ 
ಪಸರಿಸಲಿ...

 ಜನಮನಗಳ ತು೦ಬೆಲ್ಲ ನಗೆಯ ಹೊನಲು ಹರಿಯಲಿ .........

ವರುಷ  ಎರಡುಸಾವಿರದ ಹತ್ತು ಎಲ್ಲರಿಗೂ ಶುಭದಾಯಕವಾಗಲಿ.........

....................................................................................................................................................................

11 comments:

sunaath said...

ಮನಮುಕ್ತಾ,
ಹೊಸ ವರ್ಷವನ್ನು ನಗುವಿನೊಂದಿಗೆ ಸ್ವಾಗತಿಸುವ ಬಗೆಗೆ ಚೆನ್ನಾಗಿ ಹೇಳಿದ್ದೀರಿ.
ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.

Snow White said...

ಲೇಖನ ತುಂಬಾ ಚೆನ್ನಾಗಿದೆ :)
ಹೊಸ ವರ್ಷದ ಹಾರ್ದಿಕ ಶುಭಾಶಯಗಳು :)

ಮನಮುಕ್ತಾ said...

ಸುನಾಥ್ ಅವರೆ ಹಾಗೂ
snow white,

ನಿಮ್ಮ ಅನಿಸಿಕೆಗಳನ್ನು ತಿಳಿಸಿ ಪ್ರೋತ್ಸಾಹ ನೀಡಿದ್ದಕ್ಕೆ ಹಾಗೂ ಶುಭ ಹಾರೈಕೆಗಳನ್ನು ನೀಡಿದ್ದಕ್ಕೆ ನನ್ನ ಮನಃಪೂರ್ವಕ ಧನ್ಯವಾದಗಳು. ಜೊತೆಗೆ ಮತ್ತೊಮ್ಮೆ , ನಿಮಗೆ ಈ ಹೊಸವರ್ಷ ಶುಭ ತರಲಿ ಎ೦ಬ ಕೋರಿಕೆ.

ಚುಕ್ಕಿಚಿತ್ತಾರ said...

ಸಹಜ ನಗು ನಗುವವರಿಗೆ, ನೋಡುವವರಿಗೆ....
ಇಬ್ಬರಿಗೂ ಸ೦ತಸ ನೀಡುವ ಕ್ರಿಯೆ..
ಹೊಸವರುಷ ಎಲ್ಲರ ಮೊಗದಲ್ಲೂ ನಗು ಅರಳಿಸಲಿ.

Raghu said...

ಮನಮುಕ್ತ,
ಹೊಸ ವರ್ಷದ ಹಾರ್ದಿಕ ಶುಭಾಶಯಗಳು...
ನಗು ಹೆಚ್ಚಿನ ಪ್ರಾಬ್ಲಮ್ಗಳಿಗೆ ಒಂದು ಒಳ್ಳೆಯ ಮದ್ದು... ಹಾಗೆ ನಮ್ಮ ಆರೋಗ್ಯಕ್ಕೂ... ಒಳ್ಳೆಯ ಸುಂದರ ಲೇಖನ ...
ನಿಮ್ಮವ,
ರಾಘು.

ಮನಮುಕ್ತಾ said...

ರಾಘು,
ಧನ್ಯವಾದಗಳು...

ನಿಮಗೆ ಹೊಸವರುಷ ನಗುವಿನ ಹೊನಲನ್ನೆ ತರಲಿ...
ಬರುತ್ತಾ ಇರಿ. ಬರೆಯುತ್ತಾ ಇರಿ.

Narayan Bhat said...

ವರ್ಷ ಪೂರ್ತಿ ಹೀಗೆ ಬರಹಗಳನ್ನ ಕೊಡ್ತಾ ಇರಬೇಕು ನೀವು. ಹೊಸವರ್ಷದ ಶುಭಾಶಯಗಳು.

Ittigecement said...

ಹೊಸವರ್ಷದ ಸ್ವಾಗತವನ್ನು ನಗುವಿನೊಂದಿಗೆ ಮಾಡಿದ್ದೀರಿ..
ಹೊಸವರ್ಷದ ಶುಭಾಶಯಗಳು..

ಆಧುನಿಕ..
ನಾಗರೀಕ ಸಮಾಜ ತನಗೆ ತಾನೆ ಕೆಲವು ಬೇಲಿಗಳನ್ನು ಕಟ್ಟಿಕೊಂಡು ಬಿಟ್ಟಿದೆ..
ಸುಮ್ಮಸುಮ್ಮನೆ ನಗಬಾರದು..
ಅದು ತಮ್ಮ ಘನತೆಗೆ ತಕ್ಕ ರೀತಿಯಲ್ಲ..

ಮನಬಿಚ್ಚಿ ನಗುವದು ಕಡಿಮೆಯಾಗಿದೆ..

ಅದಕ್ಕೇ ಹಲವಾರು ರೋಗಗಳನ್ನು ಬಳುವಳಿಯಾಗಿ ಪಡೆಯುತ್ತಿದ್ದೇವೆ... ಅಲ್ಲವಾ..?

ಚಂದದ ಲೇಖನಕ್ಕೆ ಅಭಿನಂದನೆಗಳು...

ಮನಮುಕ್ತಾ said...

ಆನ೦ದ್,
ಧನ್ಯವಾದಗಳು.. ಪ್ರೋತ್ಸಾಹ ಕೊಡುತ್ತಿರಿ..

ಸಾಗರದಾಚೆಯ ಇಂಚರ said...

ನಿಮಗೂ ಹೊಸ ವರುಷದ ಶುಭಾಶಯಗಳು.

ಮನಮುಕ್ತಾ said...

ನಿಜ. ಸಹಜ ನಗು, ಮನಃಪೂರ್ವಕ ನಗು, ಆತ್ಮೀಯ ನಗು, ಎಲ್ಲರನ್ನೂ ಹತ್ತಿರ ತರುತ್ತದೆ,ಎಲ್ಲರಿಗೂ ಸ೦ತಸ ತರುತ್ತದೆ.
ಚುಕ್ಕಿ ಚಿತ್ತಾರ, ಪ್ರಕಾಶಣ್ಣ, ನಾರಾಯಣ ಭಟ್, ಗುರುಮುರ್ತಿಹೆಗಡೆ,ಎಲ್ಲರಿಗೂ
ನನ್ನ ಧನ್ಯವಾದಗಳು. ಸದಾ ನನಗೆ ಪ್ರೋತ್ಸಾಹ ಕೊಡುತ್ತಿರಿ.