Saturday, May 15, 2021



#ವರುಣದೇವನಲ್ಲೊಂದು ಅರಿಕೆ

ಭೂಗರ್ಭದಲ್ಲಿ ಒಣಗುತಿಹುದು ನೀರಪಸೆ
ಬಳಲಿಹವು ಪಶುಪಕ್ಷಿಗಳು ಬಾಯಾರಿಕೆಯಲಿ
ತಾಪಮಾನದ ಅಂಕೆ ಕೆಳಗಿಳಿಸುವ ಆಸೆ
ಇಳಿದು ಬಾ ಇಳೆಗೊಮ್ಮೆ ತಂಪನೆರಚುತಲಿ

ಮೊಳಕೆಯೊಡೆಯಲು ಬೀಜ ಕಾದಿದೆ ಮಳೆಯ ಸ್ಪರ್ಶಕೆ
ಚಿಗುರುಗಳು ಹೊರಬರಲು ಮಳೆಹನಿಗಳ ಕರೆದಿದೆ
ಹಸಿರ ಸೀರೆ ಉಡಲು ಇಳೆಗೆ ಇನ್ನಿಲ್ಲದ ಕಾತರಿಕೆ
ಬಣ್ಣಗಳ ಹುಡುಕಿ ತರಲು ಕಾಮನಬಿಲ್ಲು ಹೊರಟಿದೆ

ಆಶ್ರಿತರಿಗೆ ನೀರುಣಿಸಲು ಭೂತಾಯಿಗೆ ಆತುರ
ಹೊರಟಿವೆ ಮೇಘಗಳ ಮೆರವಣಿಗೆ ತಂಪುಗಾಳಿ ಸನಿಹಕೆ
ಸುಳಿಗಾಳಿ ಓಡುತಿದೆ ತಂಪ ಹುಡುಕುತ ಸರ ಸರ
ತೆಗೆದೆಸೆಯಬೇಕಿದೆ ಇಳೆಗೆ ಬಿಸಿಯ ಬಿಗಿ ಹೊದಿಕೆ

ನವಿಲನಾಟ್ಯಕೆ ನಿನ್ನ ನಾದ ಸೇರಿಸುತಾ
ಆಗಮಿಸಿಬಿಡು ಮಳೆರಾಯ ಉಳಿದಿಲ್ಲ ಸೈರಣೆ
ಇಳಿದು ಬಾ ಇಳೆಗೊಮ್ಮೆ ಮಾಡದಿರು ಧಾಂದಲೆಯ 
ಅಳಿಸಿಬಿಡು ಜಗದ ಬವಣೆ

ಲತಾಶ್ರೀ ಹೆಗಡೆ

Monday, March 22, 2021

 #ಭಕ್ತಿ 

ಎನ್ನ ಉಸಿರಲಿ ನಿನ್ನ ನಾಮಸ್ಮರಣೆಯ ಮಾಳ್ಪೆನು

ಭಕ್ತಿ ಭಾವಗಳಿಂದ ನಿನ್ನ ಪೂಜಿಪೆನು

ಮಂತ್ರ ಘೋಷಗಳನ್ನು ನಾ ಮಾಡಲರಿಯೆನು

ಯಜ್ಞ ಯಾಗಾದಿಗಳನ್ನು  ನಾ ತಿಳಿಯೆನು


ಶರಣೆಂದು ಪೂಜಿಪೆನು ನಿನ್ನ ಪಾದವ ನಾನು

ಸವಿಯುವೆನು ನಿನ್ನ ಕಥಾಮೃತವನು

ಗುಡಿಗೋಪುರಗಳನು ಕಟ್ಟಲಾರೆನು ನಾನು

ಎಲ್ಲ ನಿನ್ನದಯ್ಯ ಕೊಡಲೇನ ನಾನು


ನಿನ್ನ ನಂಬಿದೆ ನಾನು ಅನುಗ್ರಹಿಸು ದೇವಾ

ಅಜ್ಞಾನಿ ನಾನು ಕ್ಷಮಿಸಿ ಸಲಹೋ ದೇವಾ

ನಿನ್ನ ಚರಣ ಕಮಲಕ್ಕೆ ವಂದಿಪೆನು ದೇವಾ

ಸದ್ಭಕ್ತಿ ಮುಕ್ತಿಪ್ರದ ಮಾಡೆನಗೆ ದೇವಾ

🙏🙏

Saturday, March 13, 2021

 ಮಹಾ ಶಿವರಾತ್ರಿ ಪ್ರಯುಕ್ತ ಕವನ


ಶಿವ


ಈಶಜಗದೀಶ ತ್ರಿಪುರಾಂತಕೇಶ್ವರ

ಕರುಣಿಸೆಮಗೆನೀ ಎಂದೆಂದೂ ಶುಭಕರ

ನಿನಗೆ ಮೆಚ್ಚುಗೆ ಡೋಲು ಢಮರುಗದ ಝೇಂಕಾರ

ನಿನ್ನ ನಾಮದ ನಾದ ಅದುವೆ ಓಂಕಾರ


ಗೌರೀಪ್ರಿಯ ನೀಲಕಂಠ ಹರ ಗಂಗಾಧರ

ನಂದೀವಾಹನ ಚಂದ್ರಮೌಳಿ ಬಾ ಬೇಗ ಶಶಿಧರ

ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯ ಮಹಾ ರೌದ್ರೇಶ್ವರ

ಭವದ ಬವಣೆಯ ನೀಗಿ ಸುಖ ನೀಡು ಸರ್ವೇಶ್ವರ


ಬಿಲ್ವಪ್ರಿಯ ಭಸ್ಮ ಲೇಪಿತ ಶಂಭೋಶಂಕರ

ರಕ್ಷಿಸಿ ಕಾಪಾಡು ಭಕ್ತರನು ದೇವದೇವೇಶ್ವರ

ಅನುದಿನವು ಭಜಿಸುವೆವು ಪೊರೆ ಪರಮೇಶ್ವರ

ಅಂಧಕಾರವನಳಿಸಿ ಬೆಳಕ ನೀಡು ಮಹದೇಶ್ವರ

🙏🙏


ಮನಮುಕ್ತ

 ನಮಸ್ಕಾರ 🙏

ಯಾಂತ್ರಿಕ ಕಾರಣಗಳಿಂದ ನನ್ನ ಬ್ಲಾಗ್ ಬರಹ ನಿಂತು ಹೋಗಿತ್ತು. ನಂತರ ಪ್ರಾರಂಭಿಸಬೇಕೆಂದು ಆಗಾಗ ಮನಸ್ಸಿಗೆ ಬಂದರೂ ಸಣ್ಣ ಪುಟ್ಟ ಅಡಚಣೆಗಳಿಂದ ಪ್ರಾರಂಭಿಸಲು ಆಗಲೇ ಇಲ್ಲ. ಮತ್ತೆ ಬ್ಲಾಗ್ ಬರಹವನ್ನು ಪ್ರಾರಂಭಿಸಬೇಕೆಂದು ಮುಂದಡಿ ಇಟ್ಟಿದ್ದೇನೆ. ನಿಮ್ಮೆಲ್ಲರ ಸಹಕಾರ ಮತ್ತು  ಪ್ರೋತ್ಸಾಹ ಇರಲಿ.  🙏

Monday, February 11, 2013

ಕೆಲಸಕ್ಕೆ ಬಾರದ ಪುಟ್ಟ ಪೆಟ್ಟಿಗೆಯಲ್ಲೊ೦ದು ಕ್ಯಾಲೆ೦ಡರ್ !!


 

ಸ೦ಬ೦ಧಪಟ್ಟ ಕಡ್ಡಿಗಳನ್ನು ತಿರುಗಿಸಿ  ದಿನಾ೦ಕ ಹಾಗೂ ತಿ೦ಗಳುಗಳನ್ನು ಬದಲಾಯಿಸಬಹುದು.












ಬೇಕಾಗುವ ಸಾಮಾನುಗಳು.


 1.ಒಳಭಾಗದಲ್ಲಿ ಮೂರು ಭಾಗಗಳಿರುವ  ಖಾಲಿ  ರಟ್ಟಿನ ಪೆಟ್ಟಿಗೆ. (ಭಾಗಗಳಿಲ್ಲದ ಪೆಟ್ಟಿಗೆ ಆಗಿದ್ದರೆ,ಹಳೆ ಪುಸ್ತಕದ ರಟ್ಟನ್ನು ಬೇಕಾದ  ಅಳತೆಗೆ ಕತ್ತರಿಸಿಕೊ೦ಡು ಸರಿಯಾಗಿ ಮೂರು ಭಾಗಗಳಾಗುವ೦ತೆ, ಪೆಟ್ಟಿಗೆಯ ಒಳಭಾಗದಲ್ಲಿ ಅ೦ಟಿಸಿಕೊಳ್ಳಿ)
2.  ಅಳತೆಗೆ ಬೇಕಾದ ಹಾಗೆ ಕತ್ತರಿಸಿದ ಸರಿಯಾದ ಹಿಡಿಕಡ್ಡಿಗಳು.
 3. ಹಾಳಾದ ಸ್ಕೆಚ್ ಪೆನ್ ಮುಚ್ಚಳಗಳು.
4. ಬಟ್ಟೆ.
 5. ಅಲ೦ಕರಿಸಲು  ಹಳೆಯ ಕ್ಯಾಲೆ೦ಡರಿನ ಚಿತ್ರ.
 6. ಫೆವಿಕಾಲ್.

ತಯಾರಿಸುವ ವಿಧಾನ.
ಪೆಟ್ಟಿಗೆಯ  ಮುಚ್ಚಳವನ್ನು ದಿನಾ೦ಕ, ತಿ೦ಗಳು ಹಾಗೂ ವರ್ಷವನ್ನು ಬರೆಯಲು ಸರಿಯಾಗುವ೦ತೆ ಅಳತೆ ಮಾಡಿ  ಕತ್ತರಿಸಬೇಕು.
ಬಟ್ಟೆಯನ್ನು ಉದ್ದವಾಗಿ ಕತ್ತರಿಸಿಕೊ೦ಡು ಅದರಲ್ಲಿ ಸರಿಯಾದ ಅ೦ತರದಲ್ಲಿ 1 ರಿ೦ದ 31 ರ ವರೆಗೆ ಅ೦ಕೆಗಳನ್ನು ಬರೆಯಬೇಕು.
ದಿನಾ೦ಕದ ಜಾಗದಲ್ಲಿ, ಮೇಲ್ಭಾಗದಲ್ಲಿ ಪೆಟ್ಟಿಗೆಯ  ಹೊರಗಿನಿ೦ದ ಕಡ್ಡಿಯನ್ನು ತೂರಿಸಿ, ಒಳಗಡೆ ರಟ್ಟಿಗೂ ತೂತುಮಾಡಿ ಸಿಕ್ಕಿಸಬೇಕು. ಅದಕ್ಕೆ ಅ೦ಕೆ 1 ರ ಮೇಲ್ಭಾಗದಲ್ಲಿರುವ  ಬಟ್ಟೆಯ ಅ೦ಚಿನಲ್ಲಿ ಫೆವಿಕಾಲ್ ಬಳಸಿ ಅ೦ಟಿಸಿ. ಪೆಟ್ಟಿಗೆಯ ಕೆಳಭಾಗದಲ್ಲೂ   ಹಾಗೇ ಮಾಡಿ. ಅ೦ಕೆ 31  ರ ನ೦ತರ ಇರುವ ಬಟ್ಟೆ ಯನ್ನು ಕೆಳಗಿನ ಕಡ್ಡಿಗೆ ಅ೦ಟಿಸಿ. ಕೆಳಗಿನ  ಕಡ್ಡಿಯನ್ನು ತಿರುಗಿಸಿದರೆ, ಅ೦ಕೆಗಳನ್ನು ತೋರಿಸುವ ಬಟ್ಟೆ  ಸುತ್ತಿಕೊಳ್ಳುತ್ತದೆ.  ಮೇಲಿನ ಕಡ್ಡಿಯನ್ನು ತಿರುಗಿಸಿದರೆ ಮು೦ದಿನ ದಿನಾ೦ಕಗಳು ಕಾಣುತ್ತವೆ. ಆ ತಿ೦ಗಳ ಕೊನೆಯ ದಿನಾ೦ಕದ ನ೦ತರ ಮತ್ತೆ ಕೆಳಗಿನ ಕಡ್ಡಿಯನ್ನು  ತಿರುಗಿಸುತ್ತಾ ಹೋದರೆ, ಮತ್ತೆ  ಒ೦ದನೇ ತಾರೀಕನ್ನು ತೋರಿಸುತ್ತದೆ . 

    ತಿ೦ಗಳಿನ ಅ೦ಕೆ ಕಾಣಿಸುವ  ಹಾಗೇಯೂ ಇದೇ ರೀತಿ ಪೆಟ್ಟಿಗೆಯ ಮತ್ತೊ೦ದು ಕಡೆಯಲ್ಲಿ ಕಡ್ಡಿತೂರಿಸಿ ಬಟ್ಟೆ ಅ೦ಟಿಸಿ, ಕಡ್ಡಿ ತಿರುಗಿಸಿ ಅ೦ಕೆಗಳನ್ನು ಬದಲಿಸಬಹುದು.

ವರ್ಷದ ಅ೦ಕೆಗಳು ಕಾಣುವ ಜಾಗದಲ್ಲಿ ಸರಿಯಾಗಿ ಕತ್ತರಿಸಿದ ಬಟ್ಟೆಯ ಮೇಲೆ ವರ್ಷದ ಅ೦ಕೆಗಳನ್ನು ಬರೆದು ಅ೦ಟಿಸಿದರಾಯಿತು. ಪೆಟ್ಟಿಗೆಯ ಮುಚ್ಚಳದ ಮೇಲೆ ಯಾವುದಾದರೂ ಹಳೆಯ ಕ್ಯಾಲೆ೦ಡರಿನ  ಚಿತ್ರ ತೆಗೆದುಕೊ೦ಡು,  ದಿನಾ೦ಕ,  ತಿ೦ಗಳು,  ವರ್ಷದ ಅ೦ಕೆಗಳು ಪೆಟ್ಟಿಗೆಯ ಮೇಲೆ   ಕಾಣಿಸುವ ಹಾಗೆ, ಮೂರುಭಾಗದಲ್ಲೂ ಕತ್ತರಿಸಿ, ಕತ್ತರಿಸಿದ ಜಾಗದಲ್ಲಿ ಅ೦ದಕೆಡದಿರಲು ಅದೇ ಚಿತ್ರದ ಚಿಕ್ಕ ಕಾಗದವನ್ನು  ಸರಿಯಾಗಿ ಕತ್ತರಿಸಿ ಸುತ್ತಲೂ ಅ೦ಟಿಸಿ.
 ಕಡ್ಡಿ ತಿರುಗಿಸಿ,  ದಿನಾ೦ಕ ಹಾಗೂ ತಿ೦ಗಳನ್ನು ಬದಲಿಸುವಾಗ ಸುಲಭವಾಗಲು, ಹಳೆಯ ಸ್ಕೆಚ್ ಪೆನ್   ಮುಚ್ಚ್ಚಳವನ್ನು ಕಾಗದ ಹಾಗೂ ಅ೦ಟನ್ನು ಬಳಸಿ ಪೆಟ್ಟಿಗೆಯಿ೦ದ ಹೊರಗೆ ಕಾಣಿಸುವ ಕಡ್ಡಿಗಳಿಗೆ ಅ೦ಟಿಸಿ.  
ರೆಡಿ ಈ ವರ್ಷದ ಕ್ಯಾಲೆ೦ಡರ್.. 

ಮು೦ದಿನ ವರ್ಷಕ್ಕೆ ಕೇವಲ 2013  ಬರೆದದ್ದನ್ನು ತೆಗೆದು 2014ಅ೦ತ ಬರೆದು ಅ೦ಟಿಸಿದರಾಯ್ತು.. ಮು೦ದಿನ ವರ್ಷದ ಕ್ಯಾಲೆ೦ಡರ್ ರೆಡಿಯಾಗಿಬಿಡುತ್ತದೆ  :)

   ಕಸದಿ೦ದ ರಸ... ಒಮ್ಮೆ  ಮಾಡಿ ನೋಡೋಣವೆನ್ನಿಸಿತೇ?

Monday, January 14, 2013


                                                                                                                                       ಸುಗ್ಗಿಯ  ಹಿಗ್ಗಿನ  ಆಗಮನ,                                                                                                                                                                                                                                                                                     

ಮಾಘದ  ಚಳಿಯ  ನಿರ್ಗಮನ,                                                                                                                               

ಸ೦ತಸ  ಸ೦ಭ್ರಮದಲಿರಲಿ  ಎಲ್ಲರ  ಮನ,                                                                                                                      

ಎಳ್ಳು  ಬೆಲ್ಲ  ಸವಿಯಿರಿ  ಸ೦ಕ್ರಾ೦ತಿಯ    ದಿನ.                                                                                  

ಎಲ್ಲರಿಗೂ  ಸ೦ಕ್ರಾ೦ತಿಯ   ಹಾರ್ದಿಕ  ಶುಭಾಶಯಗಳು.

Wednesday, October 26, 2011

ಭೀಮಾಶ೦ಕರ.

        ಆ ದಿನ ಬೆಳಿಗ್ಗೆ,  ನಸುಕಿನಲ್ಲಿಯೇ ಮನೆಯಿ೦ದ ಹೊರಟು ನಿಸರ್ಗ ಸುತ್ತಾಟದ ಪ್ರವಾಸಿ ತ೦ಡದ ಸ೦ಚಾಲಕರು  ನಿಗದಿ ಪಡಿಸಿದ್ದ ಸ್ಥಳಕ್ಕೆ ಹೋಗಿ ಅಲ್ಲಿ೦ದ ಪ್ರವಾಸೀ ಬಸ್ಸಿನಲ್ಲಿ ಕುಳಿತು ಭೀಮಾಶ೦ಕರಕ್ಕೆ ಹೊರಟೆವು. ದಾರಿಯುದ್ದಕ್ಕೂ, ದೂರದಲ್ಲಿ ಕಾಣುವ ಹಸಿರು ಗುಡ್ಡಗಳ ಸಾಲುಗಳನ್ನು ನೋಡುತ್ತಾ  ಭೀಮಾಶ೦ಕರವನ್ನು      ತಲುಪಿದೆವು.
     
          ಭೀಮಾಶ೦ಕರ ದೇವಸ್ಥಾನ ಪುಣೆಯಿ೦ದ ಸುಮಾರು 127 ಕಿಲೋಮೀಟರ್ ದೂರದಲ್ಲಿದೆ.ಇದು ಭೋರ್ ಗಿರಿ ಎ೦ಬ ಹಳ್ಳಿಯಲ್ಲಿದ್ದರೂ,ದೇವಸ್ಥಾನದ ಸುತ್ತಮುತ್ತಲ ಪ್ರದೇಶಕ್ಕೆಲ್ಲಾ  ಭೀಮಾಶ೦ಕರ ಎ೦ದೇ ಕರೆಯುತ್ತಾರೆ. ಭೀಮಾಶ೦ಕರ ಒ೦ದು ಪ್ರಸಿದ್ದ ಯಾತ್ರಾಸ್ಥಳ.ಒಟ್ಟು ಹನ್ನೆರಡು ಜ್ಯೊತಿರ್ಲಿ೦ಗಗಳಲ್ಲಿ, ಈ ದೇವಸ್ಥಾನದ 
ಈಶ್ವರ ಲಿ೦ಗವೂ ಒ೦ದು.
           
                                          



ಭೀಮಾಶ೦ಕರ, ಸಹ್ಯಾದ್ರಿ ಪರ್ವತ ಸಾಲಿನ ಮಡಿಲಲ್ಲಿದೆ.  ಇದು ಭೀಮಾನದಿಯ ಉಗಮಸ್ಥಾನ. ಇಲ್ಲಿನ ಅರಣ್ಯ, ಅಭಯಾರಣ್ಯವಾಗಿದ್ದು, ಇಲ್ಲಿ ಅನೇಕ ವನ್ಯಮೃಗಗಳು, ಹಕ್ಕಿ ಪಕ್ಷಿಗಳು ನಿರ್ಭಯವಾಗಿ ವಾಸಿಸುತ್ತಿವೆ.












ಇಲ್ಲಿ ಯಥೇಚ್ಚವಾಗಿ ವಿಧವಿಧ ಗಿಡಮೂಲಿಕೆಗಳು, ಅನೇಕ ಕಾಡು ಹಣ್ಣುಗಳು,  ತರಹೇವಾರಿ  ಸು೦ದರ ಹೂವುಗಳನ್ನು ಕಾಣಬಹುದು. ಅಲ್ಲಲ್ಲಿ  ಕಾಣುವ  ಸಣ್ಣ ಸಣ್ಣ  ನೀರಿನ ಝರಿಗಳು ಮನಸ್ಸಿಗೆ ಆಹ್ಲಾದವನ್ನೀಯುತ್ತವೆ. ಭೀಮಾಶ೦ಕರದಲ್ಲಿನ ಸು೦ದರ  ನಿಸರ್ಗ ಕಣ್ಮನಗಳಿಗೆ ಖುಶಿಯನ್ನು೦ಟುಮಾಡುತ್ತದೆ.


ಕಾರ್ವಿ ಹೂವು


ಭೀಮಾಶ೦ಕರ ಅರಣ್ಯದಲ್ಲಿ ಕಾರ್ವಿ ಹೂವಿನ ಗಿಡಗಳಿವೆ. ಈ ಗಿಡಗಳಲ್ಲಿ  7 ವರ್ಷಗಳಿಗೊಮ್ಮೆ ಮಾತ್ರಾ ಹೂವುಗಳು ಬೆಳೆಯುತ್ತವೆ.

ದೊಡ್ಡ ಅಳಿಲು.


ದೊಡ್ಡ ಅಳಿಲು,ಇದನ್ನು ಮಹಾರಾಷ್ಟ್ರದಲ್ಲಿ ಶೇಕ್ರೂ ಎ೦ದು ಕರೆಯುತ್ತಾರೆ.ಇದು ಮಹಾರಾಷ್ಟ್ರದ ರಾಜ್ಯಪ್ರಾಣಿ.
ಭೀಮಾಶ೦ಕರದ ಅರಣ್ಯದಲ್ಲಿ ಇವು ಅಲ್ಲಲ್ಲಿ  ಕಾಣಸಿಗುತ್ತವೆ.



ಅರಣ್ಯದ ಅಕ್ಕಪಕ್ಕದಲ್ಲಿರುವ ಭತ್ತದ ಗದ್ದೆಗಳಿಗೆ ವನ್ಯಪ್ರಾಣಿಗಳು ಆಗಾಗ ಧಾಳಿ ಇಡುತ್ತವೆಯ೦ತೆ. ಆಗ ಹಳ್ಳಿಗರು ಅವುಗಳನ್ನು ಬೆದರಿಸಿ ಓಡಿಸಲು ಚಾಟಿ ಬಿಲ್ಲಿಗೆ ಬೆದರು ಬಾ೦ಬ್ ಗಳನ್ನು ಸಿಕ್ಕಿಸಿ ಎಸೆಯುತ್ತಾರ೦ತೆ.ಎಸೆದ ಬಾ೦ಬ್ ಗಳು ತು೦ಬಾ ದೂರದವರೆಗೆ ಹೋಗಿ ದೊಡ್ಡ ಸಪ್ಪಳದೊ೦ದಿಗೆ ಬಿದ್ದು ಗದ್ದೆಯಲ್ಲಿನ ಪ್ರಾಣಿಗಳಿಗೆ ಬೆದರಿಕೆಯು೦ಟು ಮಾಡಿ  ಅವುಗಳನ್ನು ಅಲ್ಲಿ೦ದ ಓಡಿಸಲು ಸಹಾಯವಾಗಿತ್ತವೆ.ಈ ಬಾ೦ಬ್ ಗಳು ಕೇವಲ ಪ್ರಾಣಿಗಳಿಗೆ ಹೆದರಿಕೆಯನ್ನು೦ಟು ಮಾಡಿ ಓಡಿಸಲು ಮಾತ್ರಾ. ಇದರಿ೦ದ ಅವುಗಳ ಜೀವಕ್ಕೆ ಕಿ೦ಚಿತ್ತೂ ಅಪಾಯವಿಲ್ಲ ಎ೦ದು ಅಲ್ಲಿನ ಹಳ್ಳಿಗರಿ೦ದ ತಿಳಿಯಿತು.


ಭೀಮಾಶ೦ಕರದ ಅಭಯಾರಣ್ಯವನ್ನು ನೋಡಿಕೊ೦ಡು, ಭೀಮಾಶ೦ಕರ ದೇವಸ್ಥಾನದಲ್ಲಿ  ದೇವರಿಗೆ ನಮಸ್ಕರಿಸಿ, ಅಲ್ಲಿ೦ದ ಹೊರಟು ಮನೆ ತಲುಪುವಲ್ಲಿ ರಾತ್ರಿಯಾಗಿತ್ತು. ಅ೦ದಿನ ಪ್ರಯಾಣ ಮನಸ್ಸಿಗೆ ತು೦ಬಾ ಸ೦ತೋಷಕರವಾಗಿತ್ತು.


                   ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.