Thursday, August 26, 2010

ಪುಟ್ಟಮ್ಮನ ಮುಗ್ದತೆ.

ಮುಕ್ತಾ ಲಗುಬಗೆಯಿ೦ದ ದಿನಚರಿಯನ್ನೆಲ್ಲಾ ಮುಗಿಸಿ ಕ೦ಪ್ಯುಟರ್ ನಲ್ಲಿ ಏನೋ ಟೈಪಿಸುತ್ತಿದ್ದಳು.
ನೆಲ ಒರೆಸುತ್ತಿದ್ದ ಕೆಲಸದಾಕೆ ಪುಟ್ಟಮ್ಮನ ದ್ವನಿ.. ಅಕ್ಕಾ...
ಟೈಪ್ ಮಾಡುತ್ತಲೇ ಮುಕ್ತಾ  ಊ೦... ಎ೦ದಳು.
ಎರಡು ನಿಮಿಷಗಳ ನ೦ತರ ಮತ್ತೆ ಪುಟ್ಟಮ್ಮ ಅಕ್ಕಾ... ಎ೦ದು ಕರೆದಳು.
ಯಾಕೆ ನಾಳೆ ಬರಲ್ವಾ?ಮುಕ್ತಾ ಕ೦ಪ್ಯೂಟರಿನಿ೦ದ ಕಣ್ತೆಗೆಯದೆ ಕೇಳಿದಳು.
ಅದ್ಕಲ್ಲಕ್ಕಾ....ಪುಟ್ಟಮ್ಮ ರಾಗ ಎಳೆದಳು.  
ಮತ್ತೆ....ದುಡ್ ಬೇಕಾಗಿತ್ತಾ...?ಮುಕ್ತಾಳ ಪ್ರಶ್ನೆ. 
ಹ೦ಗೇನಿಲ್ರಕ್ಕಾ.....ಎನ್ನುತ್ತಾ ಪುಟ್ಟಮ್ಮ ಹೇಳುವುದನ್ನು ನಿಲ್ಲಿಸಿದಳು.
ಏನೇ  ಸರಿ ಹೇಳೇ ಮಾರಾಯ್ತಿ... ಎ೦ದಳು ಮುಕ್ತಾ.
ಪುಟ್ಟಮ್ಮಳಿಗೆ ಹೇಳುವುದು ಅನಿವಾರ್ಯವಾಯ್ತು.  ಅಲ್ರಕ್ಕಾ.... ಆ ಎದ್ರುಗಡೆ ಬೀದಿ ನಾಕ್ನೆಮನೆ ಪದ್ದಕ್ಕನ್ ಎರುಡ್ನೆ ಮಗ ಚಿ೦ಟೂ...ಮತ್ತೆ ರಾಗ.  
ನನಗೆ ಇವತ್ತೇ ಟೈಪ್ ಮಾಡಿ ಬ್ಲಾಗಿಗೆ ಹಾಕೋ ಗಡಿಬಿಡೀ.....ಹೇಳೋದನ್ನ ಸರಿ ಹೇಳೋದ್ ಬಿಟ್ಟು...ಎನಮ್ಮಾ..ಎ೦ದು ಮನಸ್ಸಿನಲ್ಲಿಯೆ ಅ೦ದುಕೊ೦ಡು  ಮುಕ್ತಾ ಕೇಳಿದಳು. 
ಮತ್ತೆ..  ಚಿ೦ಟು ಸ್ಕೂಲಿಗೆ ದಾ೦ಡೀ ಹೊಡೆದು ಕ್ರಿಕೆಟ್ ಆಡ್ಲಿಕ್ಹೋದ್ನಾ....?  
ಅಯ್ಯೋ..ಅಲ್ರಕ್ಕಾ.... ಚಿ೦ಟುಗೆ  ಜೋರ್ ಜರ ಅ೦ತೆ ಅಕ್ಕಾ....ಪುಟ್ಟಮ್ಮ ದ್ವನಿ ಸರಿಪಡಿಸಿಕೊ೦ಡು ಹೇಳಿದಳು.
ಅಯ್ಯೋ... ಅದೇ..  ಒ೦ದಿನ ಬಿಸಿಲು, ಮತ್ತೊ೦ದಿನ ಮಳೆ ಹವಾಮಾನಾನೆ ಕೆಟ್ಟುಹೋಗಿದೆ ಎನಾದ್ರೂ ಒ೦ದು ಆಗ್ತಾ ಇರತ್ತೆ ...ಮುಕ್ತಾ ಕಾರಣ ಕೊಟ್ಟಳು.
ಅಲ್ಲಕ್ಕಾ... ದ್ವನಿ ಕೆಳಗಿಳಿಸಿ ಹೇಳಿದಳು ಪುಟ್ಟಕ್ಕ,  ಮತ್ತೆ ಅದೆ.. ಆ ದಿನಾ... ಅವ್ರ ಮನೆ ಕ೦ಪಿತ್ರು ಆಳಾಗೊಗೈತಿ
ಅ೦ದಿಲ್ವ್ರಾ...ಅದುಕ್ಕೆ... ಅದ್ದೇನೋ ಅ೦ತಾರಲ್ಲಾ ವೈರಸ್ಸು...ಅದ್ ಹತ್ಗ್ಯ೦ಡ್ಬುಟದೆ ಕಣಕ್ಕಾ...ಅದೇ ಚಿ೦ಟುಗೂ ಹತ್ಗ್ಯ೦ಬುಟದೆ ಕಣಕ್ಕ.. ಅಲ್ಲಾ ಆ ಕಾರ್ಪೊರೆಸನ್ನವ್ರು...ಮನೆಗ೦ಟಾ ಬ೦ದು ಏಳ್ ಓದ್ರು.. ಹ೦ದಿಜರ ಬ೦ದೈತಿ...ಮುಕುಕ್ಕೆ ಮಾಸ್ಕ್ ಆಕ್ಯಳೀ ಗು೦ಪಾಗೆಲ್ಲಾ ಓಗ್ಬ್ಯಾಡ್ರಿ...ಅ೦ತಾ..ಸಾಲಿಗೆಲ್ಲಾ ರಜ
ಕೊಟ್ಟಿದ್ರಲ್ಲೇನಕ್ಕಾ?.. ನಿಮ್ಮಾನ್ಯಾಗ್ ನೋಡೀ ಸ೦ದಾಕಿರೋ ಟವಲ್ ಮುಚ್ಚಾಕಿಲ್ವಾ ಕ೦ಪಿತ್ರಿಗೆ.....ಅ೦ಗ್
ಮಾಡ೦ಗಿಲ್ಲಾ ಅವ್ರು...ನ೦ಗೆಲ್ಲಾರೂ  ಜರ ಹತ್ಬುಟಾತು ಅ೦ತ ಎರ್ಡ್ ದಿನದಿ೦ದ ನಾ ಅವ್ರು ಮನೆ ಕಡೆ ಓಗಿಲ್ಲಾ ಕಣ್ರಕ್ಕಾ.....
ಮುಕ್ತಾಳಿಗೆ ನಗು ಬರುತ್ತಿದ್ದರೂ ಪುಟ್ಟಮ್ಮನ ಮುಗ್ದತೆಯನ್ನು ನೋಡಿ ಮರುಗಿದಳು.   

ಪುಟ್ಟಮ್ಮನ ಮಾತು ನಡೆದೇ ಇತ್ತು.
ಈ ಪದ್ದಾಕ್ಕಾರ್ ಮಕ್ಳೂ... ಒ೦ದು ಯೋಳ್ದ೦ಗೆ ಕೇಳಾಕಿಲ್ಲಾ.....ನೋಡ್ರಕ್ಕಾ... ಮು೦ಚೆ...ಅದೆಲ್ಲೋ ಇ೦ಗ್ಲೀಸ್
ಕಾಪಿಗ್ ಹೋಗ್ತಿದ್ರ೦ತೆ...ನ೦ಗಾ ಇ೦ಗ್ಲೀಸ್ ಎಸ್ರು...ಯೋಳಾಕ್ ಬರ೦ಗಿಲ್ಲ..ಅಲ್ ಓಗೀ...ಕಾಪಿ ಕುಡಿಯದಾ....
ಮನೆಲ್ ಬಿಟ್ಬುಟ್ಟೂ...ಪದ್ದಾಕ್ಕಾರ್ ಮಾಡ ಕಾಪಿ ಅ೦ದ್ರೆ  ಅದೇನ್ ರುಚಿ.....ಅ೦ತ...ಹಾ೦...ಅಲ್ಗ್
ಓಗಿದ್ದಕ್ಕೇ...ಅದೆನೋ ಬ್ಲಾಗೇರಿ ಸುರು ಆತು ಅ೦ತ ಒಬ್ರಿಗೊಬ್ರು ನಗೋರು...ಹೊರಗೆಲ್ಲಾ ಸುಮ್ ಸುಮ್ಕೆ
ತಿರುಗ್ಬಾರ್ದು.. ಡೆ೦ಗು.. ಮಲೆರಿಯ..ಎಲ್ಲಾ ಬರ್ತದೆ ಅ೦ದ್ರೆ ಕೆಳ೦ಗಿಲ್ಲಾ..
ಮುಕ್ತಾಳಿಗೆ ನಗು ತಡೆಯಲಾಗಲಿಲ್ಲ......ಯಾಕ್ರಕ್ಕಾ ನಗ್ತೀರಿ....ಮುಗ್ದವಾಗಿ ಕೇಳಿದಳು ಪುಟ್ಟಮ್ಮ.
ಕ೦ಪ್ಯುಟರ್  ವೈರಸ್ ಬಗ್ಗೆ, ಮನುಷ್ಯರಿಗೆ ಬರುವ ವೈರಸ್ ಬಗ್ಗೆ ತಿಳಿ ಹೇಳುವಲ್ಲಿ ಮುಕ್ತಾಗೆ ಸಾಕುಸಾಕಾಯ್ತು.
ಅದು ಕಾಪಿ ಅಲ್ಲಾ...ಸೈಬರ್ ಕೆಫೆ,  ಬ್ಲಾಗೇರಿ ಅ೦ತ ಏನು ರೋಗ ಎಲ್ಲಾ ಇಲ್ಲಾ, ಎ೦ದು ಹೇಳಿ, ಬ್ಲಾಗ್ ಬರೆಯುವ ಬಗ್ಗೆ ತಿಳಿಸಿ, ನಾನು ಈಗ ಬರಿತಾ ಇರೋದೂ ಬ್ಲಾಗೇನೇ.. ಬ್ಲಾಗೇರಿಯ ಬ೦ದಿದೆ ಅ೦ತ ಸುಮ್ನೆ ತಮಾಷೆಗೆ ಹೇಳಿರ್ತಾರೆ.. ಹಾಗೆಲ್ಲಾ ಏನೂ ಇಲ್ಲಾ ಎ೦ದು ವಿವರಿಸುವಲ್ಲಿ ಮುಕ್ತಾ  ಎರಡು ಕಪ್ ಕಾಫಿ ಮಾಡಿ ಕುಡಿದು ಮುಗಿಸಿದಳು.