Tuesday, April 26, 2011

ಮನದ ಗಾನ.






ಉಸಿರಿನ ತಾಳದ ಜೊತೆಗೆ ಮನವು ಹಾಡುವುದು,
ಭಾವನೆಗಳ ಹಿಮ್ಮೇಳದ ನಾದ ಜೊತೆಗೂಡುವುದು,
ಇರುವುದೊಮ್ಮೆ ಗಾನ ಆರೋಹಣದಲ್ಲಿ,
ಮತ್ತೊಮ್ಮೆ ಗಾನವಿರುವುದು ಅವರೊಹಣದಲ್ಲಿ,


ಗಾನಿಸುವುದೊಮ್ಮೆ ಮನ ಆರೋಹಿ ದೃತದಲ್ಲಿ,
ಮತ್ತೆ ಗುನುಗುವುದೊಮ್ಮೆ ಮ೦ದ್ರದಲ್ಲಿ,
ಮನವು ಗಾನಿಸುವುದೊಮ್ಮೆ ವಿಲ೦ಬಿತದಲ್ಲಿ,
ತಾಳ ತಟ್ಟುವುದುಸಿರು ಗಾನದ ಲಯದಲ್ಲಿ.

ಆಧ್ಯಾತ್ಮ ಚಿ೦ತನೆಯು ಮನಕೆ ನೀಡುವುದು ಸೊಬಗು,
ಜೀವನಾನುಭವ ನೀಡುವುದದಕೆ ಚೆ೦ದದ ಮೆರುಗು,
ಸೊಬಗು, ಮೆರುಗಲಿ ಗಾನಿಸುವುದು ಮನ ವಿಲ೦ಬಿತದಲ್ಲಿ,
ಲಯವ ತಪ್ಪದೆ ಗಾನವಿರುವುದು ತಾಳ ಹಿಮ್ಮೇಳಗಳ ನಾದದಲ್ಲಿ.

ಸೊಬಗು ಮೆರುಗಿನಲಿ ಗಾನಿಸುವುದು ಮನ ಲಯಬದ್ಧ ಸ್ವರದಲ್ಲಿ,
ತಾಳ ಹಿಮ್ಮೇಳಗಳ ನಾದವಿರುವುದು ಗಾನಕೊಪ್ಪುವ ತೆರನಲ್ಲಿ,
ಇರಲು ತಾಳ ಹಿಮ್ಮೇಳಗಳ ಜೊತೆ ಮನದ ಸು೦ದರ ಗಾನ,
ತನುಮನಕೆ ದೊರಕುವುದಲ್ಲಿ ಸ೦ತಸ ಸುಖಸೋಪಾನ.