Friday, February 11, 2011

ಸ೦ವಾದ

ಮನವನ್ನು ಕೇಳಿತ್ತು ನಗುನಗುತ ಕನಸು,
ನಾನಲ್ಲವೇ ಹೇಳು ನಿನಗೆ ಸೊಗಸು?
ಹಗಲಲ್ಲಿ ಕಾಣುವೆ ಹಗಲುಗನಸು,
ಇರುಳಲ್ಲಿ ಕಾಣುವೆ ಇರುಳುಗನಸು.

ಅ೦ದ ಚೆ೦ದದ ರೂಪ ನೀನನಗೆ ಕೊಡುವೆ,
ಮೋಹಕ ಬಣ್ಣಗಳನು ನೀ ನನಗೆ ಇಡುವೆ,
ನನ್ನ ನೋಡುತ ನೀನು ಸ೦ತೋಷ ಪಡುವೆ, 
ನನಸಿಗಿಲ್ಲದ ಸೊಗಸು ನನ್ನಲಿಹುದಲ್ಲವೆ?
 
ನಗುನಗುತ ಹೇಳಿತ್ತು ಕನಸಿಗೆ ನನಸು,
ತೊಡಬೇಡ ನಿನ್ನಯಾ ತಳುಕಿನಾ ದಿರಿಸು,
ದಿನಕೊ೦ದು ರೂಪ ಅದು ಏನು ಸೊಗಸು?
ಬಣ್ಣವಲ್ಲದ ಬಣ್ಣಕಿರದೊ೦ದು ಚಿಕ್ಕಾಸು.

ರೂಪ ಕೊಟ್ಟರದು ನಿನಗೆ ನಿಜವೇ ಅಲ್ಲವದು,
ನೀನ್ಹೇಳುವಾ ರ೦ಗು ಕಾಣಿಸದು ಹೊರಗದು,
ನನ್ನ ಪಡೆಯಲು ಮನವು ನಿನ್ನ ಕಾಣುವುದು,
ನಿಜ ಸೊಗಸು ಮನಕೆ ನನ್ನಲ್ಲಿ ಇಹುದು.

ಕನಸು ನನಸುಗಳ ಮಾತು ಸಾಗುತಲೇ ಇತ್ತು,
ಮನವು ಮಾತ್ರಾ ಸುಮ್ಮನೆ ನಗುನಗುತಲಿತ್ತು,
ಕನಸು ನನಸುಗಳಿಗೆ ಸೊಗಸು ತಾನೆನಿಸಿತ್ತು,
ಕೊನೆಯಲ್ಲಿ ಮನವು ಹೀಗೆ ಅರುಹಿತ್ತು,

ಕನಸು ಕನಸಲಿ ಸೊಗಸು,ನನಸು ನಿಜದಲಿ ಸೊಗಸು,
ಕನಸು ನನಸಾಗದಿರಲು ಮಾಸುವುದು ಸೊಗಸು,
ಬಹು ಸಪ್ಪೆಯೆನಿಸುವುದು,ಕನಸಿಲ್ಲದಾ ನನಸು
ಕನಸು ನನಸುಗಳಲಿಹುದು ಮನಕೆ ಸೊಗಸು.